ದುಬಾರಿ ಹಣ ಕೊಟ್ಟು ಕಾರು ಖರೀದಿಸಿಯೇ ಓಡಿಸಬೇಕೆಂದೇನೂ ಅಲ್ಲ. ನಿಮ್ಮದಲ್ಲದ ಕಾರನ್ನು ನಿಮ್ಮದೆಂದುಕೊಂಡು ಬಳಸಬಹುದು. ದೇಶದ ಬಹುದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾವು ಬಳಕೆದಾರರಿಗೆ ಇಂತಹದೊಂದು ಅವಕಾಶ ನೀಡಿದೆ.
ಹಣ ಕೊಟ್ಟು ಕಾರು ಖರೀದಿಸುವ ಬದಲು ಚಂದಾದಾರರಾಗುವ ಮೂಲಕ ನಿಗದಿತ ಅವಧಿಗೆ ಭೋಗ್ಯ ಅಥವಾ ಬಾಡಿಗೆಗೆ ಬ್ರ್ಯಾಂಡ್ ನ್ಯೂ ಕಾರುಗಳನ್ನು ಪಡೆಯಬಹುದು.
ಈಗಾಗಲೇ ಮಾರುತಿ ಸುಜುಕಿಯ ಕಾರುಗಳನ್ನು ಗ್ರಾಹಕರಿಗೆ ಇದೇ ಮಾದರಿಯಲ್ಲಿ ಕೊಡುತ್ತಿದ್ದು, ಇದೀಗ ಈ ಪಟ್ಟಿಗೆ ಎಸ್-ಕ್ರಾಸ್, ಇಗ್ನಿಸ್, ವ್ಯಾಗನ್ ಆರ್ ಕಾರುಗಳೂ ಸೇರಿಕೊಂಡಿವೆ. ಮಾಸಿಕ ಚಂದ ಅನ್ವಯ ವಿಮೆ ಇತ್ಯಾದಿಗಳೆಲ್ಲವೂ ಬರಲಿದ್ದು, ಇಂಧನ ತುಂಬಿಸಿ ಓಡಿಸುವುದಷ್ಟೇ ಗ್ರಾಹಕರ ಕೆಲಸ.
ವ್ಯಾಗನ್ ಆರ್ ಎಲ್ಎಕ್ಸ್ಐಗೆ ಮಾಸಿಕ ಚಂದಾ 12,722 ರೂ. ಇದ್ದರೆ, 13,772 ರೂ. ಇಗ್ನಿಸ್ ಸಿಗ್ಮ ಕಾರು 48 ತಿಂಗಳ ಅವಧಿಗೆ ಸಿಗಲಿದೆ. ವೈಟ್ ಬೋರ್ಡ್ ಅಂದರೆ, ಗ್ರಾಹಕರ ಹೆಸರಿನಲ್ಲಿಯೇ ನೋಂದಣಿ ಮಾಡಿಕೊಡಲಾಗುತ್ತದೆ. ಪ್ರಸ್ತುತ 24, 36, 48 ತಿಂಗಳ ಅವಧಿಗೆ ಚಂದಾದಾರಿಕೆ ಇದ್ದು, ನಂತರ ಅವಧಿ ವಿಸ್ತರಿಸಿಕೊಳ್ಳಬಹುದು, ಬೇರೆ ಕಾರು ಪಡೆಯಬಹುದು ಅಥವಾ ಮಾರುಕಟ್ಟೆ ದರಕ್ಕೆ ಅದೇ ಕಾರನ್ನು ಖರೀದಿಸಲೂಬಹುದು ಎಂದು ಸಂಸ್ಥೆ ತಿಳಿಸಿದೆ.