ಜಿಎಸ್ಟಿ ನೋಂದಣಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆ ನೀಡುವ ವ್ಯಾಪಾರಿಗಳಿಗೆ ಮೂರು ಕೆಲಸದ ದಿನಗಳಲ್ಲಿ ಅನುಮೋದನೆ ಸಿಗಲಿದೆ. ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಕಳೆದ ವಾರ ಜಿಎಸ್ಟಿ ನೋಂದಣಿಗೆ ಆಧಾರ್ ಧೃಡೀಕರಣವೆಂದು ತಿಳಿಸಿದೆ. ಆಗಸ್ಟ್ 21 ರಿಂದ ಇದು ಜಾರಿಗೆ ಬಂದಿದೆ.
ಅಧಿಸೂಚನೆ ಪ್ರಕಾರ, ವ್ಯಾಪಾರಿಗಳು ಆಧಾರ್ ಸಂಖ್ಯೆ ನೀಡದೆ ಹೋದಲ್ಲಿ ಜಿಎಸ್ಟಿ ನೋಂದಣಿ ತಡವಾಗಲಿದೆ. 21 ಕೆಲಸದ ದಿನಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದಲ್ಲಿ ಜಿಎಸ್ಟಿ ನೋಂದಣಿಯಾಗಲಿದೆ.
ಮಾರ್ಚ್ 14 ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ತೆರಿಗೆ ಪಾವತಿದಾರರಿಗೆ ಆಧಾರ್ ದೃಢೀಕರಣದ ಆಧಾರದ ಮೇಲೆ ಜಿಎಸ್ಟಿ ನೋಂದಣಿಗೆ ಅವಕಾಶ ನೀಡಲು ಅನುಮತಿ ಸಿಕ್ಕಿದೆ. ಕೊರೊನಾ ಕಾರಣದಿಂದಾಗಿ ಮಾರ್ಚ್ ನಲ್ಲಿ ಜಾರಿಗೆ ಬರಬೇಕಿದ್ದ ಈ ನಿಯಮವನ್ನು ಮುಂದೂಡಲಾಗಿತ್ತು.