ನವದೆಹಲಿ: ಯುಪಿಐ ವಹಿವಾಟು ಹಾಗೂ ಸೇವೆಗಳ ಮೇಲೆ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸಲಾಗುವುದು ಎನ್ನುವ ವರದಿಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಯುಪಿಐ ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.
ಉತ್ಪಾದಕತೆ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗಿರುವ, ದೇಶದ ಜನತೆಗೆ ಬಹು ಉಪಯೋಗಿಯಾಗಿರುವ ಯುಪಿಐ ಡಿಜಿಟಲ್ ಸೇವೆಗಳಿಗೆ ಶುಲ್ಕ ವಿಧಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಬೇರೆ ಮೂಲಗಳಿಂದ ಇದಕ್ಕೆ ಆಗುತ್ತಿರುವ ವೆಚ್ಚವನ್ನು ಭರಿಸಲಾಗುವುದು ಎಂದು ಹೇಳಲಾಗಿದೆ.
ಆರ್‌ಬಿಐ ಯುಪಿಐ ಸೇವೆಗಳಿಗೆ ಶುಲ್ಕ ವಿಧಿಸುವ ಬಗ್ಗೆ ಸಲಹೆ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದ್ದು, ಯುಪಿಐ ವಹಿವಾಟು ಹಾಗೂ ಸೇವೆಗಳ ಮೇಲೆ ಶುಲ್ಕ ವಿಧಿಸುವುದಿಲ್ಲವೆಂದು ಸ್ಪಷ್ಟನೆ ನೀಡಿದೆ.