ಬೆಂಗಳೂರು: ಕೊರೋನಾ ಸಂಕಷ್ಟದಿಂದ ತತ್ತರಿಸಿದ ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನವೆಂಬರ್ 1 ರಿಂದಲೇ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಿದೆ.
ಎಲ್ಲಾ ರೀತಿಯ ವಿದ್ಯುತ್ ಬಳಕೆದಾರರಿಗೆ ನವೆಂಬರ್ 1 ರಿಂದ ಜಾರಿಗೆ ಬರುವಂತೆ ಸರಾಸರಿ ಪ್ರತಿ ಯೂನಿಟ್ ಗೆ 40 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ಯೂನಿಟ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದ್ದರೂ, ನೀರಾವರಿ ಪಂಪ್ ಸೆಟ್ ಗಳನ್ನು ಹೊರತುಪಡಿಸಿ ಎಲ್ಲಾ ಸ್ಥಾವರಗಳಿಗೆ ನಿಗದಿತ ಶುಲ್ಕವನ್ನು ಪ್ರತಿ ಕಿಲೋವ್ಯಾಟ್ ಗೆ 10 ರೂಪಾಯಿ ಏರಿಕೆ ಮಾಡಲಾಗಿದೆ. ಇದರ ಪರಿಣಾಮ ಯೂನಿಟ್ ಗೆ ಸರಾಸರಿ 40 ಪೈಸೆಯಷ್ಟಾಗುತ್ತದೆ ಎನ್ನಲಾಗಿದೆ.
ಗೃಹ ಬಳಕೆದಾರರು, ವಾಣಿಜ್ಯ ಬಳಕೆದಾರರು, ಕುಡಿಯುವ ನೀರು ಸರಬರಾಜು ಯೋಜನೆ, ಖಾಸಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಿಗೂ ಈ ದರ ಅನ್ವಯವಾಗುತ್ತದೆ. ಮಾರ್ಚ್ 31 ರ ವರೆಗೆ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ವಲ್ಪ ಏರಿಕೆ ಮಾಡಲಾಗಿದ್ದು ಉಳಿದಂತೆ ಎಲ್ಲಾ ವ್ಯಾಪ್ತಿಯಲ್ಲಿ ಏಕರೂಪದ ದರ ಹೆಚ್ಚಳವಾಗಿದೆ. ಮೊದಲ 30 ಯೂನಿಟ್ ಗೆ ಒಂದು ದರ, ನಂತರದ ಯುನಿಟ್ ಗಳಿಗೆ ದರದಲ್ಲಿ ವ್ಯತ್ಯಾಸವಾಗಲಿದೆ ಎನ್ನಲಾಗಿದೆ.