ಕೇಂದ್ರ ಸಾರಿಗೆ ಸಚಿವಾಲಯ ಒಂದು ಡ್ರಾಫ್ಟ್ ನೋಟಿಫಿಕೇಶನ್ ಜಾರಿ ಮಾಡಿದೆ. ಇದರನ್ವಯ ಹಳೆಯ ವಾಹನಗಳ ಸಂಬಂಧ ಕೆಲ ಶುಲ್ಕಗಳನ್ನ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ವಾಹನ ಸ್ಕ್ರಾಪೇಜ್ ಪಾಲಿಸಿಯಡಿಯಲ್ಲಿ ಈ ಮಹತ್ವದ ಹೆಜ್ಜೆಯನ್ನ ಕೈಗೊಳ್ಳಲು ಸಚಿವಾಲಯ ಪ್ಲಾನ್ ಮಾಡಿದೆ.
ಇದರ ಅಡಿಯಲ್ಲಿ ನಿಮ್ಮ ಬಳಿ 15 ವರ್ಷಕ್ಕೂ ಹಳೆಯ ಗಾಡಿ ಇದೆ ಅಂದಾದರೆ ಅದರ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಅಥವಾ ಆರ್ಸಿ ರಿನ್ಯೂ ಮಾಡಲು ನೀವು 5 ಸಾವಿರ ರೂಪಾಯಿವರೆಗೆ ಪಾವತಿ ಮಾಡಬೇಕಾಗಿ ಬರುತ್ತೆ..!
ಅಂದರೆ ಈ ಅಕ್ಟೋಬರ್ನ ಬಳಿಕ ನಿಮ್ಮ ಆರ್ಸಿ ರಿನ್ಯೂ ಮಾಡಲು ನೀವು 8 ಪಟ್ಟು ಹೆಚ್ಚು ಹಣ ಪಾವತಿ ಮಾಡಬೇಕಾಗಿ ಬರಬಹುದು. ಇದನ್ನ ಹೊರತುಪಡಿಸಿ ಹಳೆಯ ಬೈಕ್ನ ರಿಜಿಸ್ಟ್ರೇಷನ್ಗಾಗಿ 300 ರೂಪಾಯಿ ಬದಲು ಇನ್ಮೇಲೆ 1000 ರೂಪಾಯಿವರೆಗೆ ಪಾವತಿ ಮಾಡಬೇಕು. ಅದೇ 15 ವರ್ಷ ಹಳೆಯ ಬಸ್ ಹಾಗೂ ಟ್ರಕ್ಗಳ ಫಿಟ್ನೆಸ್ ರಿನ್ಯೂವಲ್ ಸರ್ಟಿಫಿಕೇಟ್ಗಳಿಗೆ ಹಳೆಯ ಮೊತ್ತಕ್ಕಿಂತ 21 ಪಟ್ಟು ಹೆಚ್ಚು ಅಂದರೆ ಬರೋಬ್ಬರಿ 12,500 ರೂಪಾಯಿ ಪಾವತಿ ಮಾಡಬೇಕು.
ಈ ಪ್ರಸ್ತಾವನೆಯ ಪ್ರಕಾರ ವೈಯಕ್ತಿಕ ವಾಹನಗಳ ನೊಂದಣಿ ರಿನ್ಯೂ ಮಾಡಿಸಲು ವಿಳಂಬ ಮಾಡಿದ್ದಲ್ಲಿ ಪ್ರತಿ ತಿಂಗಳಿಗೆ 300 – 500 ರೂಪಾಯಿ ದಂಡದ ರೂಪದಲ್ಲಿ ಪಾವತಿ ಮಾಡಬೇಕು. ಇದು ಮಾತ್ರವಲ್ಲದೇ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವ ವಾಹನಗಳನ್ನ ರಿನ್ಯೂ ಮಾಡಲು ವಿಳಂಬ ಮಾಡಿದ್ರೆ ಪ್ರತಿ ದಿನಕ್ಕೆ 50 ರೂಪಾಯಿಯಂತೆ ದಂಡ ಪಾವತಿಸಬೇಕು.
ಖಾಸಗಿ ವಾಹನಗಳ ಮಾಲೀಕರು ವಾಹನಕ್ಕೆ 15 ವರ್ಷ ಆದ ಬಳಿಕ ಪ್ರತಿ 5 ವರ್ಷಗಳಿಗೊಮ್ಮೆ ಫಿಟ್ನೆಸ್ ಪರೀಕ್ಷೆಯನ್ನ ಮಾಡಿಸಲೇಬೇಕು. ಅದೇ ರೀತಿ ವಾಣಿಜ್ಯ ವಾಹನಗಳು ಪ್ರತಿ 8 ವರ್ಷಗಳಿಗೊಮ್ಮೆ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ರಿನ್ಯೂ ಮಾಡಿಬೇಕು. ಒಂದು ವೇಳೆ ನಿಮ್ಮ ವಾಹನ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣವಾಯ್ತು ಅಂದರೆ ಆ ವಾಹನ ನೇರವಾಗಿ ಗುಜರಿ ಸೇರಲಿದೆ. ಈ ಎಲ್ಲಾ ನಿಯಮಗಳನ್ನ ಜಾರಿಗೆ ತರುವ ಸಲುವಾಗಿ ಕೇಂದ್ರ ಸಾರಿಗೆ ಸಚಿವಾಲಯ ಈ ಡ್ರಾಫ್ಟ್ ನೋಟಿಫಿಕೇಶನ್ನ್ನು ತಯಾರಿಸಿದೆ.