ನವದೆಹಲಿ: ಕೆಲ ಪ್ರಯಾಣಿಕರ ರೈಲುಗಳನ್ನು ಓಡಿಸಲು ಖಾಸಗಿ ಜತೆ ಒಪ್ಪಂದ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅದರಿಂದ 30 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದೆ.
ಬರುವ ಮೂರ್ನಾಲ್ಕು ವರ್ಷದ ಅವಧಿಯಲ್ಲಿ ದೇಶದಲ್ಲಿ 150 ಖಾಸಗಿ ರೈಲುಗಳನ್ನು ಓಡಿಸುವ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ರ ಬಜೆಟ್ ಸಂದರ್ಭದಲ್ಲಿ ಹೇಳಿದ್ದರು.
ಆ ಪ್ರಕ್ರಿಯೆಗೆ ಸಿದ್ಧತೆ ಪ್ರಾರಂಭವಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಬಿಡ್ ಸ್ವೀಕಾರ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಐಆರ್ ಸಿಟಿಸಿ, ಹಾಗೂ ಖಾಸಗಿಯ ಎಲ್ ಆ್ಯಂಡ್ ಟಿ, ಜಿಎಂಆರ್ ಸೇರಿ 102 ಖಾಸಗಿ ಕಂಪನಿಗಳು ಮೊದಲ ಹಂತಕ್ಕೆ ಆಯ್ಕೆಯಾಗಿವೆ.
ದೇಶದ ರೈಲ್ವೆ ಜಾಲದಲ್ಲಿ ಒಟ್ಟು 12 ಕ್ಲಸ್ಟರ್ ಗಳನ್ನು ಮಾಡಿ, ಅದರಲ್ಲಿ 109 ಜೋಡಿ ರೈಲು ಮಾರ್ಗಗಳನ್ನು ಗುರುತಿಸಲಾಗಿದೆ. ಅದರಲ್ಲಿ 151 ಖಾಸಗಿ ಆಧುನಿಕ ರೈಲುಗಳನ್ನು ಓಡಿಸಲು ಪಬ್ಲಿಕ್, ಪ್ರೈವೇಟ್ ಪಾರ್ಟ್ನರ್ ಶಿಪ್ ಮಾದರಿಯಲ್ಲಿ ಒಪ್ಪಂದ ಮಾಡಿಕೊಳ್ಳಲು ಇಲಾಖೆ ತೀರ್ಮಾನಿಸಿದೆ.