ನವದೆಹಲಿ: ಬ್ಯಾಂಕ್ ಮತ್ತು ವಿಮೆ ಸಂಸ್ಥೆಗಳ ಖಾತೆಗಳಲ್ಲಿ ವಾರಸುದಾರರಿಲ್ಲದ ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಇದೆ. 2020 ರ ಡಿಸೆಂಬರ್ 31 ರವರೆಗೆ ಬ್ಯಾಂಕ್ ಗಳು ಮತ್ತು ವಿಮೆ ಸಂಸ್ಥೆ, ಕಂಪನಿಗಳ ಖಾತೆಗಳಲ್ಲಿ ಯಾವುದೇ ವಾರಸುದಾರರು ಇಲ್ಲದಿರುವ ಹಣದ ಮೊತ್ತ 50 ಸಾವಿರ ಕೋಟಿ ರೂಪಾಯಿ ದಾಟಿದೆ ಎಂದು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಭಾಗವತ್ ಕರಾಡ್ ತಿಳಿಸಿದ್ದಾರೆ.
ರಾಜ್ಯಸಭೆಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, 8.1 ಕೋಟೆ ಬ್ಯಾಂಕ್ ಖಾತೆಗಳಲ್ಲಿ ಕ್ಲೇಮ್ ಆಗದೇ ಇರುವ ಹಣ 24,356 ಕೋಟಿ ರೂಪಾಯಿಗಳಷ್ಟು ಇದೆ. ಪ್ರತಿ ಖಾತೆಯಲ್ಲಿಯೂ ಸರಾಸರಿ ಮೂರು ಸಾವಿರ ರೂಪಾಯಿ ಬಾಕಿ ಉಳಿದಿದೆ.ಇದೇ ರೀತಿ ವಿಮೆ ಕಂಪನಿಗಳಲ್ಲಿ 24,586 ಕೋಟಿ ರೂಪಾಯಿಯಷ್ಟು ಹಣ ಹಾಗೆಯೇ ಉಳಿದಿದೆ.
ವಿದೇಶಿ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳಲ್ಲಿಯೂ ವಾರಸುದಾರರಿಲ್ಲದ ಹಣವಿದೆ. ಖಾತೆದಾರರ ಪತ್ತೆಗೆ ಪ್ರಯತ್ನ ನಡೆಸುವಂತೆ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.
ನಿರ್ದಿಷ್ಟ ಅವಧಿಯ ನಂತರ ವಾರಸುದಾರರಿಲ್ಲದ ಹಣವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲು ತಿಳಿಸಲಾಗಿದೆ. ವಿಮೆ ಕಂಪನಿಗಳು ವಾರಸುದಾರರಿಲ್ಲದ ಹಣವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸಬೇಕಿದೆ.
ವಿಮಾ ಪಾಲಿಸಿಗಳ ಕ್ಲೇಮ್ ಆಗದೇ ಇರುವುದಕ್ಕೆ ಪಾಲಿಸಿದಾರರು ತಮ್ಮ ಪಾಲಿಸಿಗಳ ಕುರಿತಂತೆ ಕುಟುಂಬ ಸದಸ್ಯರಿಗೆ ತಿಳಿಸಿರುವುದಿಲ್ಲ. ಮೆಚ್ಯುರಿಟಿ ಸಂದರ್ಭದಲ್ಲಿ ದಾಖಲೆಗಳು ಸಿಗುವುದಿಲ್ಲ. ಮನೆ ಬದಲಿಸಿದಾಗ ಬ್ಯಾಂಕ್ ಖಾತೆಗಳನ್ನು ಅಪ್ಡೇಟ್ ಮಾಡುವುದಿಲ್ಲ. ಕೆಲವೊಮ್ಮೆ ನಾಮಿನೇಷನ್ ಮಾಡಿರುವುದಿಲ್ಲ. ಹೀಗೆ ಅನೇಕ ಕಾರಣಗಳಿಂದ ಬ್ಯಾಂಕ್ ಮತ್ತು ವಿಮೆ ಸಂಸ್ಥೆಗಳಲ್ಲಿ ವಾರಸುದಾರರಿಲ್ಲದ 50 ಸಾವಿರ ಕೋಟಿ ರೂಪಾಯಿಯಷ್ಟು ಹಣ ಹಾಗೆಯೇ ಉಳಿದಿದೆ ಎನ್ನಲಾಗಿದೆ.