ಮುಂಬೈ: ದೇಶದ ವಿವಿಧ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ 48,262 ಕೋಟಿ ರೂ. ಕೊಳೆಯುತ್ತಿದೆ. ವಾರಸುದಾರರಿಲ್ಲದ ಠೇವಣಿ ಮೊತ್ತ ಭಾರಿ ಏರಿಕೆಯಾಗಿದೆ.
ಕಳೆದ ವರ್ಷ 39,269 ಕೋಟಿ ರೂಪಾಯಿ ವಾರಸುದಾರರಿಲ್ಲದ ಠೇವಣಿ ಇತ್ತು. ಈ ಆರ್ಥಿಕ ವರ್ಷದಲ್ಲಿ 48,262 ಕೋಟಿ ರೂಪಾಯಿ ಇದೆ. ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಇಂತಹ ಮೊತ್ತ ಹೆಚ್ಚಾಗಿದೆ ಎಂದು ಆರ್.ಬಿ.ಐ. ಹೇಳಿದೆ.
ಕರ್ನಾಟಕ, ತಮಿಳುನಾಡು, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ರಾಜ್ಯಗಳಲ್ಲಿ ವಾರಸುದಾರರಿಲ್ಲದ ಅತಿ ಹೆಚ್ಚು ಪ್ರಮಾಣದ ಠೇವಣಿಗಳು ಬಾಕಿ ಇದ್ದು, ಯಾರೂ ಕ್ಲೇಮ್ ಮಾಡದ ಹಣದ ಕುರಿತಾಗಿ ಅರಿವು ಮೂಡಿಸುವ ಆಂದೋಲನವನ್ನು ಆರ್.ಬಿ.ಐ. ಕೈಗೊಂಡಿದೆ. ನಾಮಿನಿಗಳಾಗಿರುವವರಿಗೆ ಹಣ ಪಡೆದುಕೊಳ್ಳುವ ಬಗ್ಗೆ ಅರಿವು ಮೂಡಿಸಲು ಆಂದೋಲನ ಆರಂಭಿಸಲಾಗಿದೆ ಎಂದು ಹೇಳಲಾಗಿದೆ.
ಬ್ಯಾಂಕ್ ಗಳಲ್ಲಿ ಕ್ಲೈಮ್ ಮಾಡದ ಠೇವಣಿಗಳು ತೀವ್ರವಾಗಿ ಏರುತ್ತಿರುವ ಕಾರಣ, ರಿಸರ್ವ್ ಬ್ಯಾಂಕ್ ಅಂತಹ ಗರಿಷ್ಠ ಮೊತ್ತವನ್ನು ಹೊಂದಿರುವ ಎಂಟು ರಾಜ್ಯಗಳ ಮೇಲೆ ಕೇಂದ್ರೀಕರಿಸಿ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಿದೆ. ವಿತ್ತೀಯ ಪ್ರಾಧಿಕಾರವು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಈ ಎಂಟು ರಾಜ್ಯಗಳ ಭಾಷೆಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದೆ.