ನವದೆಹಲಿ: ಆಧಾರ್ ಸಂಖ್ಯೆಯನ್ನು ಬದಲಾವಣೆ ಮಾಡಲು ಸಾಧ್ಯವೇ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಯುಐಡಿಎಐಗೆ ನೋಟಿಸ್ ಜಾರಿ ಮಾಡಲಾಗಿದೆ.
ಆಧಾರ್ ದುರ್ಬಳಕೆಯಾಗುತ್ತಿದೆ, ಹೊಸದಾಗಿ ಆಧಾರ್ ಸಂಖ್ಯೆ ನೀಡಬೇಕು. ಆಧಾರ್ ಸಂಖ್ಯೆ ಬದಲಾವಣೆ ಮಾಡಬೇಕೆಂದು ಉದ್ಯಮಿ ರಾಜನ್ ಅರೋರಾ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಆಧಾರ್ ಪಡೆದುಕೊಂಡ ನಾಗರಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬದಲಾವಣೆ ಮಾಡಿಕೊಂಡು ಹೊಸ ಆಧಾರ್ ಪಡೆಯಲು ಅವಕಾಶ ಕೊಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.
ನನ್ನ ಅನುಮತಿಯಿಲ್ಲದೆ ನನ್ನ ಆಧಾರ್ ವಿದೇಶಿ ಕಂಪನಿಗಳಿಗೆ ಅಕ್ರಮವಾಗಿ ಜೋಡಣೆಯಾಗಿದೆ. ಇದರಿಂದ ನನ್ನ ಗುರುತು, ದತ್ತಾಂಶ ಭದ್ರತೆಗಳಿಗೆ ಅಪಾಯ ಎದುರಾಗಿದೆ. ಆಧಾರ್ ಸಂಖ್ಯೆಯನ್ನು ಬದಲಾವಣೆ ಮಾಡಿ ಹೊಸ ಆಧಾರ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆಧಾರ್ ನಿಯಮಾನುಸಾರ ಸಂಖ್ಯೆ ಬದಲಾವಣೆ ಸಾಧ್ಯವಿಲ್ಲ ಎಂದು ಯುಐಡಿಎಐ ಹೇಳಿದ್ದು, ಈ ಹಿನ್ನೆಲೆಯಲ್ಲಿ ಆಧಾರ್ ಸಂಖ್ಯೆ ಬದಲಾವಣೆ ಸಾಧ್ಯವೇ ಎಂದು ಹೈಕೋರ್ಟ್ ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ಯುಐಡಿಎಐಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 9 ಕ್ಕೆ ಮುಂದೂಡಿದೆ.