ಭಾರತದಲ್ಲಿರುವ ತಮ್ಮ ಸಿಬ್ಬಂದಿಯ ಸುರಕ್ಷತೆ ವಿಚಾರವಾಗಿ ಚಿಂತಿತರಾಗಿದ್ದೇವೆ ಎಂದು ಟ್ವಿಟರ್ ಗುರುವಾರ ಹೇಳಿಕೆ ನೀಡಿದೆ. ಕೆಲವು ದಿನಗಳ ಹಿಂದಷ್ಟೇ ದೆಹಲಿ ಪೊಲೀಸರು ದಕ್ಷಿಣ ದೆಹಲಿ ಹಾಗೂ ಗುರುಗಾಂವ್ನಲ್ಲಿರುವ ಟ್ವಿಟರ್ ಕಚೇರಿ ಮೇಲೆ ದಾಳಿ ನಡೆಸಿದ ಬಳಿಕ ಸಂಸ್ಥೆ ಈ ಹೇಳಿಕೆಯನ್ನ ನೀಡಿದೆ.
ವಿವಾದಾತ್ಮಕ ಟೂಲ್ಕಿಟ್ ವಿಚಾರವಾಗಿ ಟ್ವಿಟರ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಟ್ವಿಟರ್ನ ವಕ್ತಾರ, ಭಾರತದಲ್ಲಿ ನಮ್ಮ ಸಿಬ್ಬಂದಿಯ ಮೇಲೆ ಬೆದರಿಕೆ ಇದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಧಕ್ಕೆ ಉಂಟಾಗುವಂತಿದೆ. ಇದೆಲ್ಲದರ ಬಗ್ಗೆ ನಮಗೆ ಚಿಂತೆ ಇದೆ ಎಂದು ಹೇಳಿದ್ದಾರೆ.
ನೇರವಾಗಿ ದೆಹಲಿ ಪೊಲೀಸರ ಹೆಸರನ್ನ ಹೇಳದ ಟ್ವಿಟರ್ ಸಂಸ್ಥೆ, ವಿಶ್ವ ಹಾಗೂ ಭಾರತದ ಜನತೆಗೆ ಪೊಲೀಸರ ಬೆದರಿಕೆ ತಂತ್ರದಿಂದ ಆತಂಕಕ್ಕೆ ಒಳಗಾಗಿದ್ದೇವೆ ಎಂದೂ ಹೇಳಿದೆ. ಭಾರತದಲ್ಲಿ ಜಾರಿಯಾಗುವ ಕಾನೂನುಗಳನ್ನ ಪಾಲನೆ ಮಾಡುವಲ್ಲಿ ಟ್ವಿಟರ್ ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಲಿದೆ. ಇದರ ಜೊತೆಯಲ್ಲಿ ಭಾರತದಲ್ಲಿ ಮೇ ತಿಂಗಳಿನಿಂದ ಜಾರಿಗೆ ಬಂದಿರುವ ಐಟಿಯ ನಿಯಮದ ಬಗ್ಗೆಯೂ ಸರ್ಕಾರದ ಜೊತೆಯಲ್ಲಿ ರಚನಾತ್ಮಕವಾಗಿ ಮಾತನಾಡಲು ಇಚ್ಚಿಸುತ್ತೇವೆ ಎಂದೂ ಹೇಳಿದೆ.
ಮೇ 18ರಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಕಾಂಗ್ರೆಸ್ನದ್ದು ಎನ್ನಲಾದ ಟೂಲ್ಕಿಟ್ನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷ ಟ್ವಿಟರ್ಗೆ ಇದು ತಿರುಚಲಾದ ದಾಖಲೆ ಎಂದು ದೂರನ್ನ ನೀಡಿತ್ತು. ಈ ಸಂಬಂಧ ಪರಿಶೀಲನೆ ನಡೆಸಿದ ಟ್ವಿಟರ್ ಸಂಬಿತ್ ಸೇರಿದಂತೆ ಹಲವರ ಪೋಸ್ಟ್ಗಳನ್ನ ಮಾರ್ಕ್ ಮಾಡಿತ್ತು. ಇದರಿಂದ ಬಿಜೆಪಿಯ ನಾಯಕರು ಟ್ವಿಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.