ನವದೆಹಲಿ: ರೈತರಿಗೆ ಬೆಂಬಲವಾಗಿ ಡಿಸೆಂಬರ್ 8 ರಿಂದ ಉತ್ತರ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಸರಕು ಸಾರಿಗೆ ವಾಹನಗಳ ಪ್ರಮುಖ ಸಂಸ್ಥೆ ಎ.ಐ.ಎಂ.ಟಿ.ಸಿ. ಹೇಳಿದೆ.
ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್(AIMTC) ಸುಮಾರು 95 ಲಕ್ಷ ಟ್ರಕ್ ಮತ್ತು ಇತರೆ ಸರಕು ಸಾಗಾಣೆ ವಾಹನ ಪ್ರತಿನಿಧಿಸುವ ಉನ್ನತ ಸಂಸ್ಥೆಯಾಗಿದೆ. ರೈತರು ಹೋರಾಟ ಆರಂಭಿಸಿದ ಮೊದಲ ದಿನದಿಂದಲೂ ಬೆಂಬಲ ನೀಡುತ್ತಿರುವ ಈ ಸಂಸ್ಥೆ ಡಿಸೆಂಬರ್ 8 ರಿಂದ ಉತ್ತರ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.
ರೈತರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಸಾರಿಗೆ ಸರಕು ಸಾರಿಗೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಕುಲ್ತರಣ್ ಸಿಂಗ್ ಅಟ್ವಾಲ್ ಹೇಳಿದ್ದಾರೆ.
ಅನ್ನದಾತ ರೈತರಿಗೆ ಆಹಾರ ಪೂರೈಕೆದಾರರಾದ ಲಾರಿ ಮಾಲೀಕರು ಸಂಪೂರ್ಣ ಬೆಂಬಲ ನೀಡುತ್ತಾರೆ. ರೈತರ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಡಿಸೆಂಬರ್ 8 ರಿಂದ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ರಾಜಸ್ಥಾನ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ಸರಬರಾಜು ಸಾರಿಗೆ ಸಂಚಾರ ನಿಲ್ಲಿಸುತ್ತೇವೆ ಎಂದು ಎಐಎಂಟಿಸಿ ಕೋರ್ ಕಮಿಟಿ ಅಧ್ಯಕ್ಷ ಬಾಲ್ ಮಲ್ಕಿತ್ ಸಿಂಗ್ ತಿಳಿಸಿದ್ದಾರೆ.