ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಾಗ ಪ್ರತಿಯೊಬ್ಬರಿಗೂ ಮೊದಲು ನೆನಪಿಗೆ ಬರುವುದು ಪಿಪಿಎಫ್ ಖಾತೆ. ಅನೇಕರು ಈ ಖಾತೆಯನ್ನು ಮಾಡಿಸಿಕೊಂಡಿರುತ್ತಾರೆ.
ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಮಾಡಿಸಿಕೊಳ್ಳುವ ಈ ಪಿಪಿಎಫ್ ಖಾತೆಯನ್ನು ಒಂದೂರಿಂದ ಇನ್ನೊಂದು ಊರಿಗೆ ಹೋದರೆ ವರ್ಗಾವಣೆ ಮಾಡಿಸಿಕೊಳ್ಳುವ ಬಗ್ಗೆ ಅನೇಕರಿಗೆ ಮಾಹಿತಿ ಇರುವುದಿಲ್ಲ. ಆದರೆ ಯಾವ ರೀತಿ ಮಾಡಿಸಿಕೊಳ್ಳಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ
ಪೂರ್ಣ ತೆರಿಗೆ ವಿನಾಯಿತಿ ಇರುವ ಪಿಪಿಎಫ್ ಠೇವಣಿ ದೀರ್ಘಕಾಲಿಕ ಹೂಡಿಕೆಯ ಒಂದು ಭಾಗ. ಒಂದು ವೇಳೆ ಪೋಸ್ಟ್ ಆಫೀಸ್‌ನಲ್ಲಿ ಅಥವಾ ಬ್ಯಾಂಕಿನಲ್ಲಿ ಒಮ್ಮೆ ಖಾತೆ ಆರಂಭಿಸಿದರೆ, ಇನ್ನೊಂದು ಕಡೆ ಪಿಪಿಎಫ್ ಖಾತೆ ಆರಂಭಿಸಲು ಸಾಧ್ಯವಿಲ್ಲ. ಆದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗ ಮಾಡಿಸಿಕೊಳ್ಳಲು ಕುರಿತ ಮಾಹಿತಿ ಇಲ್ಲಿದೆ.
ಮೊದಲಿಗೆ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಿಂದ ಖಾತೆಯನ್ನು ವರ್ಗಾಯಿಸಿಕೊಳ್ಳಬೇಕೋ ಆ ಶಾಖೆಗೆ ತೆರಳಿ, ಪಿಪಿಎಫ್ ವರ್ಗಾವಣೆಗೆ ಮನವಿ ಪತ್ರ ನೀಡಬೇಕು. ಈ ವೇಳೆ ನಿವಾಸ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಬೇಕು. ಇದಾದ ಬಳಿಕ ಶಾಖೆಯಿಂದ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಬಳಿಕ ನೀವು ಬಯಸುವ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನ ಶಾಖೆಗೆ ಮೂಲ ದಾಖಲೆಗಳನ್ನು ರವಾನಿಸಲಾಗುತ್ತದೆ.
ಈ ರೀತಿಯ ಪ್ರಕ್ರಿಯೆಗೆ ಚಾಲನೆ ಸಿಗುವ ಮೊದಲು ನೀವು ಮನವಿ ಸಲ್ಲಿಸಿದ ಅರ್ಜಿಯನ್ನು ನಿಮ್ಮೊಂದಿಗೆ ಇಟ್ಟುಕೊಂಡಿರಬೇಕು. ಒಮ್ಮೆ ವರ್ಗಾವಣೆಗೊಂಡ ಶಾಖೆಯಿಂದ ದಾಖಲೆಗಳು ಇನ್ನೊಂದು ಶಾಖೆಗೆ ಬಂದ ಬಳಿಕ ಇಲ್ಲಿ ನೂತನ ಖಾತೆ ಆರಂಭಿಸಬೇಕು. ಈ ವೇಳೆ ನೂತನ ಖಾತೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ನೀಡಬೇಕು. ಇಷ್ಟಾದ ಬಳಿಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡರೆ, ನಿಮ್ಮ ಖಾತೆ ಯಶಸ್ವಿಯಾಗಿ ವರ್ಗಾವಣೆಯಾಗುತ್ತದೆ