ಕೊಪ್ಪಳ: ಏಕಸ್ ಇಂಡಿಯಾ ಕಂಪನಿಯಿಂದ ನಿರ್ಮಾಣವಾಗಲಿರುವ ಬೃಹತ್ ಆಟಿಕೆ ಕೈಗಾರಿಕಾ ಕಾರಿಡಾರ್ ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಲಿದ್ದಾರೆ.
450 ಎಕರೆ ಪ್ರದೇಶದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಬೃಹತ್ ಆಟಿಕೆ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾಗಲಿದ್ದು, 5000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಈ ಯೋಜನೆಯಿಂದ ಸುಮಾರು 40 ಸಾವಿರ ಮಂದಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ. ಘಟಕ ಸ್ಥಾಪನೆಗೆ ಮೂರು ಕಂಪನಿಗಳು ರೆಡಿಯಾಗಿದ್ದು ಇನ್ನೂ ಎರಡು ಕಂಪನಿಗಳು ಬರುವ ನಿರೀಕ್ಷೆಯಿದೆ.
ಏಕಸ್ ಕಂಪನಿ ಸೇರಿದಂತೆ ವಿವಿಧ ಜಾಗತಿಕ ಕಂಪನಿಗಳು ಆಟಿಕೆಗಳನ್ನು ತಯಾರಿಸಲಿವೆ. ಸಾದಾ ಆಟಿಕೆಗಳಿಂದ ಹಿಡಿದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಆಟಿಕೆಗಳನ್ನು ಉತ್ಪಾದಿಸಲಾಗುವುದು. ಈ ಕ್ಲಸ್ಟರ್ ಏಷ್ಯಾದಲ್ಲಿಯೇ ಅತಿ ದೊಡ್ಡ ಕ್ಲಸ್ಟರ್ ಆಗಿದೆ. ದೇಶದ ಮೊದಲ ಆಟಿಕೆ ಕ್ಲಸ್ಟರ್ ಇದಾಗಿದ್ದು, ಚೀನಾ, ವಿಯೆಟ್ನಾಂನಂತಹ ದೇಶಗಳಿಂದ ದೊಡ್ಡ ಕಂಪನಿಗಳನ್ನು ಸೆಳೆದು ಬಂಡವಾಳ ಹೂಡಿಕೆ ಜೊತೆಗೆ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.