ಟೋಲ್ ಶುಲ್ಕವನ್ನು ಏಕಾಏಕಿ ದುಪ್ಪಟ್ಟು ಏರಿಕೆ ಮಾಡಲಾಗಿದ್ದು, ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ.
ದಾವಣಗೆರೆ ಹೆಬ್ಬಾಳು ಟೋಲ್ ನಲ್ಲಿ ಟೋಲ್ ಶುಲ್ಕ ಭಾರಿ ಹೆಚ್ಚಳ ಮಾಡಲಾಗಿದೆ. ಕಾರ್, ಜೀಪ್, ಲಘು ವಾಹನಗಳ ಶುಲ್ಕ 60 ರಿಂದ 120 ರೂ.ಗೆ ಹೆಚ್ಚಳವಾಗಿದೆ.
ಲಘು ವಾಣಿಜ್ಯ ವಾಹನ ಶುಲ್ಕ 95 ರೂ.ನಿಂದ 195 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಬಸ್, ಟ್ರಕ್ ಗಳಿಗೆ 195 ರೂ.ನಿಂದ 410 ರೂಪಾಯಿಗೆ ಹೆಚ್ಚಳವಾಗಿದೆ.
ತ್ರಿ ಆಕ್ಸಲ್ ವಾಹನಗಳ ಟೋಲ್ ಶುಲ್ಕ 215 ರೂ. ನಿಂದ 645 ರೂ.ಗೆ ಹೆಚ್ಚಲವಾಗಿದೆ.
ಭಾರಿ ನಿರ್ಮಾಣ ವಾಹನಗಳಿಗೆ 630 ರೂ. ನಿಂದ 780 ರೂ.ಗೆ ಹೆಚ್ಚಳ ವಾಡಲಾಗಿದೆ.
ಪ್ರಸ್ತುತ ಇರುವ ಟೋಲ್ ಗಳಲ್ಲಿ 10 ಕ್ಕಿಂತ ಹೆಚ್ಚು ಟೋಲ್ ಗಳ ಅವಧಿ ಮುಗಿದಿದ್ದರೂ, ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಪೂನಾ –ಬೆಂಗಳೂರು ಹೆದ್ದಾರಿಯನ್ನು ಹುಬ್ಬಳ್ಳಿಯವರೆಗೆ ನಾಲ್ಕು ಪಥದಿಂದ 6 ಪಥವಾಗಿ ಮೇಲ್ದರ್ಜೆಗೇರಿಸಿದ್ದು ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ. ದುಬಾರಿ ಟೋಲ್ ಶುಲ್ಕ ಸಾರಿಗೆ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮವನ್ನೇ ಬೀರಿದೆ. 8 ಚಕ್ರದ ಲಾರಿಗಳು ದಾವಣಗೆರೆಯಿಂದ ಮುಂಬೈಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಬಂದು ವಾಪಸ್ ದಾವಣಗೆರೆಗೆ ತಲುಪಲು 12,000 ರೂ. ಟೋಲ್ ಶುಲ್ಕ ಕಟ್ಟುತ್ತಿದ್ದು, ಈಗ 24,000 ರೂ.ಗೂ ಅಧಿಕ ಟೋಲ್ ಶುಲ್ಕ ಪಾವತಿಸುವ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ ಮತ್ತು ಬೆಂಗಳೂರು ನಡುವಿನ 11 ಟೋಲ್ ಗಳಲ್ಲಿ ಶುಲ್ಕವನ್ನು ಶೇಕಡ 100ರಷ್ಟು ಹೆಚ್ಚಳ ಮಾಡಲು ಹೆದ್ದಾರಿ ಪ್ರಾದಿಕಾರ ಮುಂದಾಗಿದೆ ಎಂದು ಹೇಳಲಾಗಿದೆ.