ದಾವಣಗೆರೆ: ರಾಜ್ಯದ ವಿವಿಧ ಹೆದ್ದಾರಿಗಳಲ್ಲಿ ಅವಧಿ ಮುಗಿದ 16 ಟೋಲ್ ಗೇಟ್ ಗಳನ್ನು ರದ್ದು ಮಾಡಬೇಕೆಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಲಾರಿ ಮಾಲೀಕರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಹೆದ್ದಾರಿಗಳಲ್ಲಿ 42 ಟೋಲ್ ಗೇಟ್ ಗಳಿದ್ದು, ಇವುಗಳಲ್ಲಿ 16 ಟೋಲ್ ಗೇಟ್ ಗಳ ಅವಧಿ ಪೂರ್ಣಗೊಂಡಿದೆ. ಅಂತಹ ಅವಧಿ ಪೂರ್ಣಗೊಂಡ ಟೋಲ್ ಗೇಟ್ ಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಹೆದ್ದಾರಿ ನಿರ್ಮಾಣಕ್ಕೆ ಖರ್ಚು ಮಾಡಿದ 10 ಪಟ್ಟು ಹಣ ವಸೂಲಿ ಮಾಡಲಾಗಿದೆ. ಹೀಗಾಗಿ ಅವಧಿ ಪೂರ್ಣಗೊಂಡ ಟೋಲ್ ಗೇಟ್ ಗಳನ್ನು ರದ್ದು ಮಾಡಬೇಕು. ಎಲ್ಲಾ ಟೋಲ್ ಗೇಟ್ ಗಳಲ್ಲಿ ಕೃಷಿ ಉತ್ಪನ್ನಗಳಿಗೆ ಸುಂಕ ವಸೂಲಿ ಮಾಡಬಾರದು. ಸರಕು ಅನ್ ಲೋಡ್ ಮಾಡಿ ವಾಪಸ್ ಬರುವ ಖಾಲಿ ಲಾರಿಗಳಿಗೆ ಟೋಲ್ ಶುಲ್ಕ ವಿಧಿಸಬಾರದು ಎಂದು ಒತ್ತಾಯಿಸಿದ್ದಾರೆ.