ನವದೆಹಲಿ: ನಿಗದಿತ ಅವಧಿಯಲ್ಲಿ ಸಾಲದ ಕಂತು ಪಾವತಿಸಿದವರಿಗೆ ಹಬ್ಬದ ಹೊತ್ತಲ್ಲೇ ಬಹುಮಾನ ನೀಡುವ ಸಾಧ್ಯತೆ ಇದೆ.
ಮಾರ್ಚ್ 1 ರಿಂದ ಆಗಸ್ಟ್ 31ರ ನಡುವೆ ಸಾಲದ ಕಂತು ಪಾವತಿಗೆ ವಿನಾಯಿತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಯೋಜನೆ ಪ್ರಗತಿಯಲ್ಲಿದೆ. ದೀಪಾವಳಿಗೆ ಮೊದಲು ಇಎಂಐ ಪಾವತಿಸಿದವರಿಗೆ ಬಹುಮಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
2 ಕೋಟಿ ರೂ. ವರೆಗಿನ ಮನೆ ಅಡಮಾನ ಸೇರಿದಂತೆ ಎಲ್ಲ ರೀತಿಯ ಸಾಲಗಳಿಗೆ ಅನುಕೂಲವಾಗುವಂತೆ ಚಕ್ರಬಡ್ಡಿ ಮನ್ನಾ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಸಾಲ ಕಂತು ಪಾವತಿಸಿದವರಿಗೆ ಪ್ರಯೋಜನ ಕಲ್ಪಿಸಲು ಯೋಜಿಸಲಾಗಿದೆ.
ಯಾವುದೇ ವಲಯದ ನಿರ್ದಿಷ್ಟ ಸಾಲಕ್ಕೆ ತಾರತಮ್ಯ ಉಂಟುಮಾಡಬಾರದು. ವೈಯಕ್ತಿಕ ಸಾಲಗಳಿಗೆ ಮಾತ್ರ ಬಡ್ಡಿಗೆ ವಿನಾಯಿತಿ ನೀಡುವುದು, ಗೃಹ ಸಾಲಗಳಿಗೆ ನಿರಾಕರಿಸುವುದು ಸರಿಯಲ್ಲ. ಎರಡು ಕೋಟಿ ರೂಪಾಯಿವರೆಗೆ ಸಾಲ ಪಡೆದ ಎಲ್ಲರಿಗೂ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 27ರಂದು ಮಾರ್ಚ್ 1ರಿಂದ ಇಎಂಐ ಪಾವತಿಗೆ ಮೂರು ತಿಂಗಳು ವಿನಾಯಿತಿ ಘೋಷಿಸಿತ್ತು. ಮೇ 22 ರಲ್ಲಿ ಆಗಸ್ಟ್ 31ರ ವರೆಗೆ ಮತ್ತೆ ಮೂರು ತಿಂಗಳು ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ಚಕ್ರಬಡ್ಡಿ ಎಲ್ಲ ಸಾಲಗಾರರಿಗೆ ಅನ್ವಯವಾಗಿರುತ್ತದೆ. ಆರು ತಿಂಗಳ ವಿನಾಯಿತಿ ಪ್ರಯೋಜನ ಪಡೆದವರು ಮತ್ತು ಇಎಂಐ ಪಾವತಿಸಿದವರಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗುತ್ತಿದೆ.
ಬಡ್ಡಿ ಮನ್ನಾ ವಾಣಿಜ್ಯ ಬ್ಯಾಂಕುಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಶೀಘ್ರದಲ್ಲಿಯೇ ಸಾಲಗಾರರಿಗೆ ಪರಿಹಾರ ಒದಗಿಸುವ ಗುರಿಯೊಂದಿಗೆ ಯೋಜನೆ ರೂಪಿಸಲಾಗುತ್ತಿದ್ದು ದೀಪಾವಳಿಯ ಒಳಗೆ ಜಾರಿಯಾಗಬಹುದೆಂದು ಹೇಳಲಾಗಿದೆ.