
ನವದೆಹಲಿ: ಎಂಎಸ್ ಧೋನಿ ಜನಿಸಿದ ದಿನವೇ ಇನ್ಫೋಸಿಸ್ ಆರಂಭವಾಯ್ತು. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
1981 ರ ಜುಲೈ 7 ರಂದು ಎರಡು ಗಮನಾರ್ಹ ಸಂಗತಿಗಳ ಆರಂಭದ ಮಹತ್ವದ ದಿನವಾಗಿದೆ. ಒಬ್ಬರು ಒಂದು ಪೀಳಿಗೆಯ ಉದ್ಯಮಿಗಳನ್ನು ಪ್ರೇರೇಪಿಸಲು ಮುಂದಾಗಿ ಭಾರತ ಸಂಪತ್ತು ಸೃಷ್ಟಿಸಿದ್ದರೆ, ಮತ್ತೊಬ್ಬರು ಕೌಶಲ್ಯ, ಕಠಿಣ ಪರಿಶ್ರಮ, ಮಹತ್ವಕಾಂಕ್ಷೆಯ ಮೂಲಕ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದರು.
ಅವತ್ತು ಇನ್ಫೋಸಿಸ್ ಸಂಸ್ಥೆ ಆರಂಭವಾಯಿತು. ಅದೇ ದಿನ ಮಹೇಂದ್ರ ಸಿಂಗ್ ಧೋನಿ ಜನಿಸಿದರು. ಜುಲೈ 7,1981 ಮಹತ್ವದ ದಿನವಾಗಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಈ ಮಾಹಿತಿ ಹಂಚಿಕೊಂಡಿದ್ದಾರೆ. ಇಬ್ಬರ ನಡುವೆ ಸಾಮ್ಯತೆಗಳಿವೆ. ಗ್ರಾಮೀಣ ಮತ್ತು ನಗರ, ಶ್ರೀಮಂತರು ಮತ್ತು ಬಡವರು, ಅತ್ಯಾಧುನಿಕತೆ ಮತ್ತು ಹಳ್ಳಿಗಾಡಿನ ಜನರು, ಅನಕ್ಷರಸ್ಥರು ಮತ್ತು ಅವಿದ್ಯಾವಂತರು ಹೀಗೆ 1.3 ಶತಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಧೋನಿ ಬೆಳೆಸಿದ್ದಾರೆ.

ನನ್ನ ಸಹೋದರಿಯರು, ಸ್ನೇಹಿತರು, ಚಾಲಕರು, ಸೆಕ್ಯುರಿಟಿ ಗಾರ್ಡ್ ಗಳು ಧೋನಿ ಯಶಸ್ಸಿಗಾಗಿ ಪ್ರಾರ್ಥಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇನ್ಫೋಸಿಸ್ ನಂತೆ ಧೋನಿ ಕೂಡ ಸಾಮಾನ್ಯ ಮಧ್ಯಮವರ್ಗದ ಹಿನ್ನೆಲೆಯಿಂದ ಬಂದವರು. ಕೌಶಲ್ಯ, ಪರಿಶ್ರಮ ಆಕಾಂಕ್ಷೆ ಹೊಂದಿದ್ದರೆ ಯಶಸ್ವಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟರು.
ಒಬ್ಬ ನಾಯಕನ ಮೊದಲ ಜವಾಬ್ದಾರಿ ಎಂದರೆ ಭವ್ಯ ದೃಷ್ಟಿಯನ್ನು ರೂಪಿಸುವುದು, ನಿರೂಪಿಸುವುದಾಗಿದೆ. ತನ್ನ ಜನರ ಆಕಾಂಕ್ಷೆ, ವಿಶ್ವಾಸ ಹೆಮ್ಮೆ ಭರವಸೆ ಉತ್ಸಾಹವನ್ನು ಹೆಚ್ಚಿಸುವುದಾಗಿದೆ. ಅದನ್ನು ಪರಿಪೂರ್ಣವಾಗಿ ಧೋನಿ ಅವರು ಮಾಡಿದ್ದಾರೆ ಎಂದು ಇನ್ಫೋಸಿಸ್ ನಾರಾಯಣಮೂರ್ತಿ ಅಂಕಣವೊಂದರಲ್ಲಿ ಬರೆದಿದ್ದಾರೆ.
ತನ್ನ ತಂಡದೊಂದಿಗೆ ವೈಭವ ಹಂಚಿಕೊಳ್ಳುವ ಕಾರ್ಯವನ್ನು ಧೋನಿ ಕಂಡುಕೊಂಡಿದ್ದರು. ಆತ್ಮವಿಶ್ವಾಸ ಧೋನಿಯ ವಿಶಿಷ್ಟ ಲಕ್ಷಣವಾಗಿದೆ. 2011 ರಲ್ಲಿ ವಿಶ್ವಕಪ್ ಜಯಿಸಿದ ನಂತರ ಧೋನಿ ಅವರು ಸಚಿನ್ ತೆಂಡೂಲ್ಕರ್ ಮತ್ತು ಗ್ಯಾರಿ ಕರ್ಸ್ಟನ್ ಅವರೊಂದಿಗೆ ಸಂಭ್ರಮಿಸಿದನ್ನು ಮರೆಯಲು ಸಾಧ್ಯವೇ ಎಂದು ಹೇಳಲಾಗಿದೆ.
ಒಬ್ಬ ಸಮರ್ಥ ನಾಯಕ ಶಾಂತವಾಗಿರುತ್ತಾನೆ. ಆದರೆ, ಬಿಕ್ಕಟ್ಟಿನ ಸಮಯದಲ್ಲಿ ತನ್ನ ಮುಂದಿನ ನಡೆಯ ಬಗ್ಗೆ ಯೋಚಿಸುತ್ತಾನೆ. ಧೋನಿ ಪ್ರದರ್ಶಿಸಿದ ಸಮಚಿತ್ತತೆ ಮುಖ್ಯವಾಗಿತ್ತು. ಸೋಲು-ಗೆಲುವಿನಲ್ಲಿಯೂ ಅವರು ಉತ್ತಮ ನಾಯಕರಾಗಿದ್ದರು. ಸೋಲು-ಗೆಲುವನ್ನು ಹೇಗೆ ಸ್ವೀಕರಿಸಬೇಕು? ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಮನಗಂಡಿದ್ದರು.
ಇನ್ಫೋಸಿಸ್ ಈಗ 239 ಕೆ ಉದ್ಯೋಗಿಗಳನ್ನು ಹೊಂದಿದೆ. ಜಾಗತಿಕ ಮಟ್ಟದ ದೊಡ್ಡ ಸಂಸ್ಥೆಯಾಗಿದೆ. ಜಾಗತಿಕ ಸಲಹಾ ಮತ್ತು ಐಟಿ ಸೇವೆಗಳ ಪ್ರಮುಖ ಕಂಪನಿಯಾಗಿರುವ ಇನ್ಪೋಸಿಸ್ 250 ಡಾಲರ್ ಬಂಡವಾಳದೊಂದಿಗೆ ಆರಂಭವಾಗಿ ಈಗ 12.77 ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆದಿದೆ. 39 ವರ್ಷಗಳಲ್ಲಿ ಸಾಫ್ಟ್ವೇರ್ ಸೇವೆಗಳ ಪ್ರತಿಭೆಗಳ ಜಾಗತಿಕ ತಾಣವಾಗಿ ಬೆಳೆದಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಎಂಎಸ್ ಧೋನಿ ಮತ್ತು ಇನ್ಫೋಸಿಸ್ ನಡುವಿನ ವಿಶೇಷ ಸಂಪರ್ಕ, ಸಂಬಂಧದ ಬಗ್ಗೆ ಹೇಳಿದ್ದಾರೆ.