ಬೆಂಗಳೂರು : ವನ್ಯಜೀವಿಗಳ ಉತ್ಪನ್ನ ಇಟ್ಟುಕೊಂಡವರು 2-3 ತಿಂಗಳಲ್ಲಿ ವಾಪಸ್ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜನರಿಗೆ ಈ ಬಗ್ಗೆ ಅರಿವು ಇಲ್ಲ. ಹಾಗಾಗಿ ವನ್ಯಜೀವಿಗಳ ಉತ್ಪನ್ನಗಳನ್ನು ತಮ್ಮಲ್ಲಿಯೇ ಇರಿಸಿಕೊಂಡಿದ್ದು, ಅವುಗಳನ್ನು ಅರಣ್ಯ ಇಲಾಖೆಗೆ ವಾಪಸ್ ಕೊಡಲು ಒಂದು ಅವಕಾಶ ನೀಡುತ್ತಿದ್ದೇವೆ. ಸಿಎಂ ಜೊತೆ ಚರ್ಚೆ ಮಾಡಿ ನವೆಂಬರ್ 9ಕ್ಕೆ ಸಚಿವ ಸಂಪುಟದ ಸಭೆಯಲ್ಲಿ ಮಂಡನೆ ಮಾಡಿ ಜಾರಿಗೆ ತರುತ್ತೇವೆ ಎಂದರು. ಈಗಾಗಲೇ ಎಲ್ಲಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಡೆಡ್ಲೈನ್ ಬಗ್ಗೆ ಕರಡು ಪ್ರತಿ ಸಿದ್ದಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ವನ್ಯಜೀವಿಗಳ ಚರ್ಮ ಹುಲಿಯ ಉಗುರು ಧರಿಸುವುದು ಕಾನೂನು ಉಲ್ಲಂಘನೆಯಾಗಿದ್ದು, 1972ರ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗುತ್ತದೆ . ವನ್ಯಜೀವಿಗಳ ಚರ್ಮ ಉಗುರು ಬಳಕೆ ಮಾಡುವುದು ನಿಷೇಧವಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬಳಿಕ ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಭಾರಿ ಸದ್ದು ಮಾಡಿತ್ತು, ನಟ, ರಾಜಕಾರಣಿಗಳು ಸೇರಿದಂತೆ ಪ್ರಮುಖರಿಗೆ ನೋಟಿಸ್ ನೀಡಲಾಗಿತ್ತು.