ಈ ಫೋಟೋವನ್ನು ಅಂಡ್ರಾಯ್ಡ್ ಫೋನ್ ನ ವಾಲ್ ಪೇಪರ್ ಆಗಿ ಇಟ್ಟುಕೊಂಡರೇ ನಿಮ್ಮ ಹ್ಯಾಂಡ್ಸೆಟ್ ಹಾಳಾಗುತ್ತೆ ಎಚ್ಚರ.
ಇಂಥದ್ದೊಂದು ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಈಗ ಆ ಫೋಟೋ ತೆಗೆದ ವ್ಯಕ್ತಿ ಈ ಕುರಿತು ಮಾತನಾಡಿದ್ದಾರೆ.
ವಿಜ್ಞಾನಿ ಹಾಗೂ ಹವ್ಯಾಸಿ ಛಾಯಾಗ್ರಾಹಕ ಗೌರವ್ ಅಗರವಾಲ್ ಎಂಬುವವರು 2009 ರ ಆಗಸ್ಟ್ ನಲ್ಲಿ ಮೌಂಟಾನಾದ ಗ್ಲಾಸಿಯರ್ ರಾಷ್ಟ್ರೀಯ ಉದ್ಯಾನದ ಸೇಂಟ್ ಮೇರಿ ಸರೋವರದ ಸಮೀಪ ತೆಗೆದ ಚಿತ್ರ ಇದಾಗಿದೆ.
ಅವರು ಬಿಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ”ನಾನು ಜನರ ಫೋನ್ ಗಳನ್ನು ಹಾಳು ಮಾಡಬೇಕು ಎಂಬ ಉದ್ದೇಶ ಹೊಂದಿರಲಿಲ್ಲ. ಚಂದದ ಚಿತ್ರ ಎಂದು ಸಹಜವಾಗಿ ಫ್ಲಿಕರ್ ನಲ್ಲಿ ಫೋಟೋ ಹಂಚಿಕೊಂಡೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋನ್ ಹಾಳಾದ ಬಗ್ಗೆ ಹೇಳಿಕೊಳ್ಳುವವರೆಗೂ ನಾನು ತೆಗೆದ ಫೋಟೋ ಮೊಬೈಲ್ ಫೋನ್ ಗಳಿಗೆ ಹಾನಿ ಉಂಟು ಮಾಡುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ” ಎಂದಿದ್ದಾರೆ.
ಈ ಫೋಟೋವನ್ನು ವಾಲ್ ಪೇಪರ್ ಆಗಿ ಇಟ್ಟುಕೊಂಡ ನಂತರ ಇದ್ದಕ್ಕಿದ್ದಂತೆ ಫೋನ್ ಸ್ವಿಚ್ ಆಫ್, ಆನ್ ಆಗಲು ಶುರುವಾಯಿತು ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಈ ಫೋಟೋ ಇಟ್ಟ ತಕ್ಷಣ ಫ್ಯಾಕ್ಟರಿ ರಿಸೆಟ್ ಕೇಳಿತು ಎಂದು ಹೇಳಿಕೊಂಡಿದ್ದಾರೆ. ಸ್ಯಾಮ್‌ಸಂಗ್ ಫೋನ್ ರೀ ಸೆಟ್ ಕೇಳಿತು ಎಂದು ಇನ್ನೊಬ್ಬರು ಹೇಳಿದ್ದಾರೆ.
ಅಗರವಾಲ್ ಅವರು ನಿಕಾನ್ ಕ್ಯಾಮರಾದಿಂದ ಫೋಟೋ ತೆಗೆದಿದ್ದು, ನಂತರ ಲೈಟ್ ರೂಂ ಎಂಬ ಸಾಫ್ಟ್ ವೇರ್ ಮೂಲಕ ಫೋಟೋ ಎಡಿಟ್ ಮಾಡಿದ್ದಾರೆ. ಕಲರ್ ಮೋಡ್ ಅನ್ನು ಆಯ್ಕೆ ಮಾಡಿ ಎಕ್ಸ್ ಪೋರ್ಟ್ ಮಾಡಿದ್ದಾರೆ.
“ನಾನು ಈ ಫೋಟೋವನ್ನು ಪ್ರೊ ಫೋಟೋ ಆರ್ ಜಿಬಿ ಫಾರ್ಮೆಟ್ ನಲ್ಲಿ ಸೇವ್ ಮಾಡಿದ್ದೆ. ಇದು ಅಂಡ್ರಾಯ್ದ್ ಫೋನ್ ಗೆ ಹೊಂದಿಕೆಯಾಗುವುದಿಲ್ಲ ಎನಿಸುತ್ತದೆ. ಇದರಿಂದ ನಾನು ಈಗ ಬೇರೆ ಸಾಫ್ಟ್ ವೇರ್ ಹಾಗೂ ಫೋಟೋವನ್ನು ಸೇವ್ ಮಾಡುವ ಫಾರ್ಮೆಟ್ ಅನ್ನು ಬದಲಿಸಿದ್ದೇನೆ” ಎಂದು ಅಗರವಾಲ್ ಹೇಳಿಕೊಂಡಿದ್ದಾರೆ.