ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಹೊಸ ಹೊಸ ಅನ್ವೇಷಣೆಗಳು ಮಾರುಕಟ್ಟೆಗೆ ಪ್ರವೇಶ ಮಾಡುತ್ತಿದೆ. ಇದೀಗ ಭಾರತದಲ್ಲಿ ತಯಾರಾದ ಕಾಂಟ್ಯಾಕ್ಟ್ ಲೆಸ್ ಥರ್ಮಾಮೀಟರ್ ಹೊಂದಿರುವ ಮೊಬೈಲ್ ಮಾರುಕಟ್ಟೆ ಪ್ರವೇಶಿಸುತ್ತಿದೆ.
ದೇಶಿಯ ಮೊಬೈಲ್ ಹ್ಯಾಂಡ್ ಸೆಟ್ ಬ್ರಾಂಡ್ ಆದ ಲಾವ ಮಂಗಳವಾರ ತನ್ನ ಹೊಸ ಉತ್ಪನ್ನದ ಬಗ್ಗೆ ಮಾಹಿತಿ ಪ್ರಕಟಿಸಿದೆ. 1999 ರೂ. ಮೌಲ್ಯದ ಕಾಂಟ್ಯಾಕ್ಟ್ ಲೆಸ್ ಥರ್ಮಾ ಮೀಟರ್ ಫೀಚರ್‌ನೊಂದಿಗೆ ಲಾವಾ ಪ್ಲಸ್ ಒನ್ ಎಂಬ ಹೊಸ ಉತ್ಪನ್ನ ಪ್ರಕಟಿಸಿದೆ.
ಬಳಕೆದಾರರು ತಮ್ಮ ಕೈ ಅಥವಾ ಹಣೆಯ ಬಳಿ ಕೆಲ ಸೆಂಟಿಮೀಟರ್ ಅಂತರದಲ್ಲಿ ಮೊಬೈಲ್ ಹಿಡಿದರೆ ದೇಹದ ಉಷ್ಣಾಂಶ ಪರದೆಯ ಮೇಲೆ ಕಾಣಿಸುತ್ತದೆ. ಈ ರೀತಿ ಹತ್ತು ಬಾರಿಯ ರೀಡಿಂಗ್ ದಾಖಲೆಯನ್ನು ಸಂಗ್ರಹಿಸಿ ಆ ಸಂದೇಶವನ್ನು ಇತರರಿಗೆ ಕಳಿಸಲು ಸಹ ವ್ಯವಸ್ಥೆ ಇದೆ.
ಲಾವ ಪ್ಲಸ್ ಒನ್ ಥರ್ಮಾಮೀಟರ್ ಒಳಗೊಂಡ ಈ ಮೊಬೈಲ್ ಹೆಚ್ಚಿನ ವೆಚ್ಚ ಭರಿಸಲಾಗದ ಅಥವಾ ವೈದ್ಯರು, ವೈದ್ಯಕೀಯ ಸೌಲಭ್ಯವನ್ನು ಸುಲಭವಾಗಿ ಪಡೆಯಲಾಗದವರಿಗೆ ಅನುಕೂಲಕರ ಎಂದು ಕಂಪನಿ ಹೇಳಿಕೊಂಡಿದೆ.
2.4 ಇಂಚ್ ಡಿಸ್‌ಪ್ಲೇ, ಗಟ್ಟಿಮುಟ್ಟಾದ ಪಾಲಿಕಾರ್ಬೊನೇಟ್ ಬಾಡಿ, ಟಾರ್ಚ್, ವಿಜಿಎ ಕ್ಯಾಮರಾ, 32ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ, 1800ಎಂಎಎಚ್ ಬ್ಯಾಟರಿ ಹೊಂದಿದೆ.