ಹೊಸ ವರ್ಷ ಹತ್ತಿರ ಬರ್ತಿದೆ. ಹೊಸ ವರ್ಷಕ್ಕೆ ಕಾಲಿಡ್ತಿದ್ದಂತೆ ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹೆಚ್ಚಾಗಲಿದೆ. ಜನಸಾಮಾನ್ಯರು ಮುಂದಿನ ತಿಂಗಳು ಅಂದರೆ ಜನವರಿ 1, 2022 ರಿಂದ ಅನೇಕ ವಸ್ತುಗಳ ಮೇಲೆ ಹೆಚ್ಚಿನ ಹಣ ಪಾವತಿಸಬೇಕಾಗಿದೆ. ಜನವರಿ 1 ರಿಂದ, ಸಿದ್ಧ ಉಡುಪುಗಳ ಮೇಲಿನ ಜಿಎಸ್ಟಿ ದರ ಹೆಚ್ಚಾಗಲಿದೆ. ಈಗಿದ್ದ ಶೇಕಡಾ 5 ಜಿಎಸ್ಟಿ ದರವನ್ನು ಶೇಕಡಾ 12ಕ್ಕೆ ಹೆಚ್ಚಿಸಲಾಗ್ತಿದೆ. ಇದ್ರಿಂದ ಸಿದ್ಧ ಉಡುಪುಗಳ ಬೆಲೆ ಏರಿಕೆಯಾಗಲಿದೆ. ಜಿಎಸ್‌ಟಿ ಹೆಚ್ಚಳದಿಂದ ಚಿಲ್ಲರೆ ವ್ಯಾಪಾರಕ್ಕೆ ಹೊಡೆತ ಬೀಳಲಿದೆ. ಇದೇ ಕಾರಣಕ್ಕೆ ಜಿಎಸ್ಟಿ ದರ ಏರಿಕೆ ಮಾಡದಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಆದ್ರೆ ಸರ್ಕಾರ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಸಿದ್ಧ ಉಡುಪುಗಳು ಮಾತ್ರವಲ್ಲ ಪಾದರಕ್ಷೆಗಳ ಬೆಲೆ ಕೂಡ ಜನವರಿ ಒಂದರಿಂದ ಹೆಚ್ಚಾಗಲಿದೆ. ಪಾದರಕ್ಷೆ ತಯಾರಿಗೆ ಬೇಕಾದ ವಸ್ತುಗಳ ಜಿಎಸ್ಟಿ ದರ ಹೆಚ್ಚಾಗುತ್ತಿದೆ. ಹಾಗಾಗಿ ಪಾದರಕ್ಷೆಗಳ ಬೆಲೆ ಏರಿಕೆ ಕಾಣಲಿದೆ.
ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವವರ ಜೇಬಿಗೂ ಕತ್ತರಿ ಬೀಳಲಿದೆ. ಜನವರಿ ಒಂದರಿಂದ ಜೊಮಾಟೊ ಮತ್ತು ಸ್ವಿಗ್ಗಿ ಅಪ್ಲಿಕೇಶನ್ ಮೂಲಕ ಮಾಡುವ ಆರ್ಡರ್ ಗೆ ತೆರಿಗೆ ಪಾವತಿ ಮಾಡಬೇಕು. ಹೊಸ ವರ್ಷದಿಂದ ಶೇಕಡಾ 5ರಷ್ಟು ಜಿಎಸ್‌ಟಿ ಕೂಡ ಪಾವತಿಸಬೇಕು. ಆದ್ರೆ ಗ್ರಾಹಕರಿಂದ ಯಾವುದೇ ತೆರಿಗೆ ಸಂಗ್ರಹಿಸುವುದಿಲ್ಲವೆಂದು ಸರ್ಕಾರ ಹೇಳಿದೆ. ಕಂಪನಿಗಳು ತೆರಿಗೆ ಪಾವತಿಸಬೇಕು. ಸಾಮಾನ್ಯವಾಗಿ ಕಂಪನಿಗಳ ಮೇಲೆ ಬೀಳುವ ಹೊರೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ. ಈ ಕಂಪನಿಗಳು ಕೂಡ ಆಹಾರ ಬೆಲೆ ಏರಿಕೆ ಮಾಡುವ ನಿರೀಕ್ಷೆಯಿದೆ.