ಮಾರ್ಚ್ 31ಕ್ಕೆ 2020-21ರ ಆರ್ಥಿಕ ವರ್ಷ ಮುಗಿಯಲಿದೆ. ಹಾಗಾಗಿ ಅನೇಕ ತೆರಿಗೆದಾರರು, ತೆರಿಗೆ ಉಳಿಸಲು ಅನೇಕ ಕಡೆ ಹೂಡಿಕೆ ಮಾಡುತ್ತಿದ್ದಾರೆ. ಮಾರ್ಚ್ 31ರೊಳಗೆ ಮುಗಿಸುವ ಕೆಲಸ ಇದೊಂದೇ ಅಲ್ಲ. ತೆರಿಗೆಗೆ ಸಂಬಂಧಿಸಿದ ಇತರ ಕಾರ್ಯಗಳನ್ನು ಮಾರ್ಚ್ 31ರೊಳಗೆ ಮುಗಿಸಬೇಕಿದೆ.
ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ ಅನ್ನು ವಿಳಂಬ ರಿಟರ್ನ್ ಎಂದು ಕರೆಯಲಾಗುತ್ತದೆ. ಮಾರ್ಚ್ 31 ರ ಗಡುವಿನ ನಂತ್ರ 2019-20ರ ಆರ್ಥಿಕ ವರ್ಷಕ್ಕೆ ಪರಿಷ್ಕೃತ ಅಥವಾ ವಿಳಂಬವಾದ ಐಟಿಆರ್ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಇನ್ನು ಮಾರ್ಚ್ 31 ಪಾನ್ ಕಾರ್ಡನ್ನು ಆಧಾರ್ ಗೆ ಜೋಡಿಸಲು ಕೊನೆಯ ದಿನವಾಗಿದೆ. ಒಂದು ವೇಳೆ ಆಧಾರ್ ಜೊತೆ ಪಾನ್ ಲಿಂಕ್ ಆಗದೆ ಹೋದಲ್ಲಿ ಪಾನ್ ನಿಷ್ಕ್ರಿಯಗೊಳ್ಳುತ್ತದೆ.
ವಿವಾದ್ ಸೆ ವಿಶ್ವಾಸ್ ಯೋಜನೆಯಡಿ ಘೋಷಣೆ ಸಲ್ಲಿಸುವ ಗಡುವನ್ನು ಮಾರ್ಚ್ 31 ಕ್ಕೆ ವಿಸ್ತರಿಸಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿಯ ಅಧಿಸೂಚನೆಯ ಪ್ರಕಾರ, ಯೋಜನೆಯಡಿಯಲ್ಲಿ ಹೆಚ್ಚುವರಿ ಬಡ್ಡಿ ಇಲ್ಲದೆ ತೆರಿಗೆ ಪಾವತಿಸುವ ದಿನಾಂಕವನ್ನು ಬದಲಿಸಲಾಗಿಲ್ಲ. ಇದಕ್ಕೆ ಏಪ್ರಿಲ್ 30 ಕೊನೆ ದಿನ. ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಕಾಯ್ದೆ 2020 ಅನ್ನು ಮಾರ್ಚ್ 17, 2020 ರಂದು ಜಾರಿಗೆ ತರಲಾಯಿತು. ಬಾಕಿ ಇರುವ ಆದಾಯ ತೆರಿಗೆ ದಾವೆಗಳನ್ನು ಕಡಿಮೆ ಮಾಡುವುದು ಇದ್ರ ಉದ್ದೇಶವಾಗಿದೆ.