ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಚಿಕಿತ್ಸೆಗೆ ಪಡೆದುಕೊಂಡ ಹಣಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಈ ಮೂಲಕ ಕಂಪನಿಗಳು, ಉದ್ಯೋಗದಾತರು ನೌಕರರಿಗೆ ಚಿಕಿತ್ಸೆ ಉದ್ದೇಶಕ್ಕೆ ನೀಡಿದ ಹಣ ತೆರಿಗೆ ವಿನಾಯಿತಿ ಹೊಂದಿರುತ್ತದೆ ಎಂದು ತಿಳಿಸಲಾಗಿದೆ.
ಕೊರೊನಾದಿಂದ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಕಂಪನಿಗಳು ನೀಡುವ ಆರ್ಥಿಕ ನೆರವಿಗೆ ಕೂಡ ಆದಾಯ ತೆರಿಗೆ ಇರುವುದಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ನೀಡಿರುವ ಮಾಹಿತಿಯಂತೆ, ಕೋವಿಡ್ ಚಿಕಿತ್ಸೆಗಾಗಿ ಹಣಕಾಸಿನ ನೆರವು ಪಡೆದುಕೊಂಡಿದ್ದರೆ ಅದಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. 2019 -20 ನೇ ಸಾಲಿನ ಆರ್ಥಿಕ ವರ್ಷ ಮತ್ತು ನಂತರದಲ್ಲಿ ಆದಾಯ ತೆರಿಗೆ ಪಾವತಿದಾರರು ಕೆಲಸ ನಿರ್ವಹಿಸುವ ಕಂಪನಿ ಅಥವಾ ಯಾವುದೇ ವ್ಯಕ್ತಿಗಳಿಂದ ಹಣ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿ ನೀಡಲಾಗುವುದು.
ಆದಾಯ ತೆರಿಗೆ ಪಾವತಿದಾರರು ಅವರ ಕುಟುಂಬದವರಿಗೆ, ಕಂಪನಿಗಳು ಹಿತೈಷಿಗಳು ಆರ್ಥಿಕ ನೆರವು ನೀಡಿದ್ದಲ್ಲಿ ಅದಕ್ಕೆ ಕೂಡ ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ಕಂಪನಿಗಳಿಂದ ಮೃತರ ಕುಟುಂಬಕ್ಕೆ ಎಷ್ಟೇ ಮೊತ್ತ ನೀಡಿದರೂ ಆದಾಯ ತೆರಿಗೆ ಇರುವುದಿಲ್ಲ. ಇತರ ವ್ಯಕ್ತಿಗಳಿಂದ ಪಡೆಯುವ ಮೊತ್ತಕ್ಕೆ 10 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಇರುತ್ತದೆ.