ನವದೆಹಲಿ: ಬೇಸಿಗೆಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡದಿರಲು ಮುಂಜಾಗ್ರತೆ ಕ್ರಮ ಕೈಗೊಳ್ಳಲು ವಿದ್ಯುತ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಅವರು ಬೇಸಿಗೆ ಅವಧಿಯಲ್ಲಿ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಕಲ್ಲಿದ್ದಲು, ರೈಲ್ವೆ, ವಿದ್ಯುತ್ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಲ್ಲಿದ್ದಲು ಹಂಚಿಕೆ ಮಾಡಲು ಪಾರದರ್ಶಕ ಮತ್ತು ನ್ಯಾಯಯುತ ವಿಧಾನ ಅನುಸರಿಸಲು ಸೂಚನೆ ನೀಡಿದ್ದಾರೆ.
ವಾರ್ಷಿಕ ವಿದ್ಯುತ್ ಬಳಕೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಹೆಚ್ಚಿನ ಪಾಲು ಹೊಂದಿದೆ. ಗೃಹಬಳಕೆ ವಿದ್ಯುತ್ ಬೇಡಿಕೆ ನಾಲ್ಕನೇ ಸ್ಥಾನದಲ್ಲಿದ್ದು, ಕೃಷಿ ಕ್ಷೇತ್ರ ಆರನೇ ಸ್ಥಾನದಲ್ಲಿದೆ. ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆ ನಡುವೆ ಅಂತರ ಉಂಟಾದಾಗ ಅದನ್ನು ಸರಿದೂಗಿಸಲು ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ.
ಬೇಸಿಗೆಯಲ್ಲಿ ವಿದ್ಯುತ್ ಕಡಿತವಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಏಪ್ರಿಲ್ ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 299 ಗಿಗಾ ವ್ಯಾಟ್ ತಲುಪುವ ನೀರಿಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಪ್ರಮಾಣದ ಕಲ್ಲಿದ್ದಲು ದಾಸ್ತಾನು ಮಾಡಿಕೊಳ್ಳಬೇಕು. ಗರಿಷ್ಠ ಬೇಡಿಕೆ ಪೂರೈಸಲು ಅನಿಲ ಆಧಾರಿತ ಶಕ್ತಿ ಬಳಕೆಗೆ ಸೂಚನೆ ನೀಡಲಾಗಿದೆ. ಮಾರ್ಚ್ 16 ರಿಂದ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ವಿದ್ಯುತ್ ಸ್ಥಾವರಗಳಿಗೆ ನಿರ್ದೇಶನ ನೀಡಿರುವುದು ಸೇರಿದಂತೆ ಲೋಡ್ ಶೆಡ್ಡಿಂಗ್ ತಡೆಗೆ ಬಹುಮುಖಿ ಕಾರ್ಯತಂತ್ರ ರೂಪಿಸಲಾಗಿದೆ.