ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ 50 ಶ್ರೀಲಂಕಾ ರೂಪಾಯಿ ಮತ್ತು ಡೀಸೆಲ್ ಬೆಲೆ 60 ಶ್ರೀಲಂಕಾ ರೂಪಾಯಿ ಹೆಚ್ಚಾಗಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಇಂಧನ ಬೆಲೆ ಏರಿಕೆ ಮಾಡದೆ ಬೇರೆ ದಾರಿಯೇ ಇಲ್ಲದಂತಾಗಿದೆ.
ಕಳೆದ ಎರಡು ತಿಂಗಳಲ್ಲಿ ನೆರೆಯ ದೇಶದಲ್ಲಿ ಇಂಧನ ಬೆಲೆಯನ್ನು ಮೂರನೇ ಬಾರಿಗೆ ಏರಿಸಲಾಗಿದೆ. ಬೆಲೆ ಏರಿಕೆ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಜಾರಿಗೆ ಬಂದಿದೆ ಎಂದು ಸಾರ್ವಜನಿಕ ವಲಯದ ಇಂಧನ ಮಾರಾಟಗಾರ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ತಿಳಿಸಿದೆ.
ಲಂಕಾ ಐಒಸಿ ಕೂಡ ಅದೇ ಪ್ರಮಾಣದಲ್ಲಿ ಬೆಲೆಗಳನ್ನು ಹೆಚ್ಚಿಸಿದೆ. ಈ ಏರಿಕೆಯೊಂದಿಗೆ, ಪೆಟ್ರೋಲ್ ಬೆಲೆ ಲೀಟರ್ ಗೆ 470 ಶ್ರೀಲಂಕಾ ರೂಪಾಯಿಗಳಿಗೆ ಮತ್ತು ಡೀಸೆಲ್ ಲೀಟರ್‌ಗೆ 460 ಶ್ರೀಲಂಕಾ ರೂಪಾಯಿಗಳಿಗೆ ಏರಿದೆ.
ಮೇ 22 ರಂದು ಶ್ರೀಲಂಕಾ ಪೆಟ್ರೋಲ್ ಬೆಲೆಯನ್ನು ಶೇಕಡಾ 24.3 ರಷ್ಟು ಮತ್ತು ಡೀಸೆಲ್ ಬೆಲೆಯನ್ನು ಶೇಕಡಾ 38.4 ರಷ್ಟು ಹೆಚ್ಚಿಸಿದೆ. ವಿದೇಶಿ ವಿನಿಮಯ ಸಂಗ್ರಹದ ಕೊರತೆಯಿಂದಾಗಿ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ, ಈ ಕಾರಣದಿಂದಾಗಿ ನಿರಂತರವಾಗಿ ತೈಲ ದರ ಹೆಚ್ಚಳ ಮಾಡಲಾಗುತ್ತಿದೆ. ಮೇ ತಿಂಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 420 ರೂಪಾಯಿ, ಡೀಸೆಲ್ ಬೆಲೆ ಲೀಟರ್ ಗೆ 400 ರೂಪಾಯಿ ಏರಿಕೆ ಮಾಡಲಾಗಿತ್ತು.
ಪೆಟ್ರೋಲ್ ಮತ್ತು ಡೀಸೆಲ್ ಕಡಿಮೆ ಪೂರೈಕೆಯಿಂದಾಗಿ ಶ್ರೀಲಂಕಾದ ಪೆಟ್ರೋಲ್ ಪಂಪ್ ಗಳಲ್ಲಿ ವಾಹನಗಳ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿದ್ದು, ಜನರು ಇಂಧನಕ್ಕಾಗಿ ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.