ಬೆಂಗಳೂರು: ಪೋಡಿ ಶುಲ್ಕ ಹೆಚ್ಚಳದ ಬೆನ್ನಲ್ಲೇ ಸರ್ಕಾರ ಹದ್ದುಬಸ್ತು ಶುಲ್ಕವನ್ನು ಹೆಚ್ಚಳ ಮಾಡಿದೆ. ಭೂ ಸರ್ವೇ ಹದ್ದುಬಸ್ತು ಅರ್ಜಿ ಶುಲ್ಕವನ್ನು 35 ರೂ. ನಿಂದ 4000 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ಹೊರೆಯಾಗಿ ಪರಿಣಮಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆಯವರೆಗೆ ಪ್ರತಿ ಸರ್ವೆ ನಂಬರ್ ಗೆ 35 ರೂ.ಶುಲ್ಕವನ್ನು 1500 ರೂ.ಗೆ ಏರಿಕೆ ಮಾಡಲಾಗಿದೆ. ಎರಡು ಎಕರೆ ಮೇಲ್ಪಟ್ಟು ಪ್ರತಿ ಎಕರೆಗೆ ಹೆಚ್ಚುವರಿಯಾಗಿ 300 ರೂ.ಕಟ್ಟಬೇಕಿದೆ. ಗರಿಷ್ಠ ಶುಲ್ಕ 3000 ರೂ. ಆಗಿದೆ.
ನಗರ ವ್ಯಾಪ್ತಿಯಲ್ಲಿ ಎರಡು ಎಕರೆಯವರೆಗೆ 2000 ರೂ., ಎರಡು ಎಕರೆ ಮೇಲ್ಪಟ್ಟು ಪ್ರತಿ ಹೆಚ್ಚುವರಿ ಎಕರೆಗೆ 400 ರೂಪಾಯಿ ಶುಲ್ಕ ಪಾವತಿಸಬೇಕಿದೆ. ಗರಿಷ್ಠ ಶುಲ್ಕ 4000 ರೂ. ಆಗಿದೆ.
ಮೊದಲೇ ಕೊರೋನಾ, ಅತಿವೃಷ್ಟಿ, ಅನಾವೃಷ್ಟಿ, ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರ ಮೇಲೆ ಸರ್ಕಾರ ಪ್ರಹಾರ ನಡೆಸಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ, ಕಂದಾಯ ಇಲಾಖೆ ಮೋಜಿಣಿ ತಂತ್ರಾಂಶ ನಿರ್ವಹಣಾ ವೆಚ್ಚ, ಖಾಸಗಿ ಸರ್ವೆಯರ್ ಗಳಿಗೆ ಸರ್ಕಾರ ಕೊಡುತ್ತಿರುವ ವೆಚ್ಚವನ್ನು ಸರಿದೂಗಿಸಲು ಸರ್ವೆ ಶುಲ್ಕವನ್ನು 4 ಸಾವಿರ ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಸಣ್ಣ ರೈತರಿಗೆ ಹೊರೆಯಾಗಿದೆ ಎನ್ನಲಾಗಿದೆ.