ಚೆಕ್ ಬೌನ್ಸ್ ಪ್ರಕರಣಗಳ ಶೀಘ್ರ ಇತ್ಯರ್ಥ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ಸಲ್ಲಿಸಲು ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ರಚಿಸಿದೆ. ಮೂರು ತಿಂಗಳ ಒಳಗೆ ಈ ಸಂಬಂಧ ಸಲಹೆಗಳನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಈ ಸಮಿತಿಗೆ ಸೂಚಿಸಿದೆ.
ಇಂಥ ಪ್ರಕರಣಗಳ ಆಲಿಕೆಗೆಂದೇ ಹೆಚ್ಚುವರಿ ಕೋರ್ಟ್‌ಗಳನ್ನು ರಚಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ಕೊಟ್ಟಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎಸ್.ಎ. ಬೋಬ್ಡೆ ನೇತೃತ್ವದ ಐವರು ನ್ಯಾಯಾಧೀಶರ ಪೀಠಕ್ಕೆ ತಿಳಿಸಿದ್ದಾರೆ.
ದೇಶಾದ್ಯಂತ ಚೆಕ್ ಬೌನ್ಸ್‌ನ 35 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿದ್ದು, ಈ ಸಂಬಂಧ ಕಾಯಿದೆಯೊಂದನ್ನು ತರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಳೆದ ವಾರ ಸೂಚಿಸಿತ್ತು.
ಸಂವಿಧಾನದ 247ನೇ ವಿಧಿಯ ಅಡಿ, ಪರಕ್ರಾಮ್ಯ ಲಿಖಿತ ಅಧಿನಿಯಮದ ಅಡಿ ಹೆಚ್ಚುವರಿ ಕೋರ್ಟ್‌ಗಳನ್ನು ಸ್ಥಾಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಪೀಠವು ತಿಳಿಸಿದೆ.
ಮೇಲ್ಕಂಡ ವಿಧಿಯಡಿ, ಚಾಲ್ತಿಯಲ್ಲಿರುವ ಹಾಗೂ ಹೊಸ ಕಾನೂನುಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚುವರಿ ಕೋರ್ಟ್‌ಗಳ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆ.