ನವದೆಹಲಿ: ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಾಲದ ಕಂತು ಪಾವತಿಸಲು ವಿನಾಯಿತಿ ನೀಡಲಾಗಿದ್ದು, ಈ ಅವಧಿಯಲ್ಲಿ ಇಎಂಐ ಮೇಲಿನ ಚಕ್ರ ಬಡ್ಡಿಯನ್ನು ಮನ್ನಾ ಮಾಡಲಾಗಿದೆ.
ಕೃಷಿ ಸಾಲ ಹೊರತುಪಡಿಸಿ ಎರಡು ಕೋಟಿ ರೂಪಾಯಿವರೆಗಿನ ಮೇಲಿನ ಚಕ್ರ ಬಡ್ಡಿಯನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಇದರಿಂದ ಸಾಲಗಾರರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.
30 ಲಕ್ಷ ರೂಪಾಯಿಯಷ್ಟು ಸಾಲ ಪಡೆದ ಗ್ರಾಹಕರಿಗೆ ಚಕ್ರಬಡ್ಡಿ ಮನ್ನಾದಿಂದ 1700 ರೂ.ನಷ್ಟು ಉಳಿತಾಯವಾಗಬಹುದು. ಚಕ್ರಬಡ್ಡಿ ಮನ್ನಾದಿಂದ ಗ್ರಾಹಕರಿಗೆ ದೊಡ್ಡ ಅನುಕೂಲವಾಗುತ್ತಿಲ್ಲ. ಹಾಗಾಗಿ ಬಡ್ಡಿಮನ್ನಾ ಮಾಡಬೇಕೆಂಬ ಚರ್ಚೆ ನಡೆದಿದೆ.
ಅನೇಕ ಗ್ರಾಹಕರು ಬಡ್ಡಿ ಮನ್ನಾಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ನವೆಂಬರ್ 5 ರಂದು ಬಡ್ಡಿಮನ್ನಾ ಸಂಬಂಧಿತ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಬಡ್ಡಿ ಮನ್ನಾ ವಿಚಾರಣೆ ನಡೆದಿದ್ದು ನವೆಂಬರ್ 5 ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಮೊರಾಟೋರಿಯಂ ಅವಧಿಯಲ್ಲಿನ ಚಕ್ರ ಬಡ್ಡಿ ಮನ್ನಾ ಆಗಿದ್ದು, ಬಡ್ಡಿಯನ್ನು ಕೂಡ ಮನ್ನ ಮಾಡಬಹುದೇ ಎಂಬ ಕುತೂಹಲ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಲ್ಲಿದೆ.