ನವದೆಹಲಿ: ಸಹಕಾರ ಕ್ಷೇತ್ರ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಹಕಾರ ವಿಷಯದಲ್ಲಿ ಕೇಂದ್ರ ಮೂಗು ತೂರಿಸಬಾರದು, ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನು ರೂಪಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2011 ರಲ್ಲಿ ಸಂವಿಧಾನದ 97 ನೇ ತಿದ್ದುಪಡಿ ಮಾಡುವ ಮೂಲಕ ಸಹಕಾರ ಸಂಘಗಳಿಗೆ ಕಾಯಕಲ್ಪ ನೀಡಲು ಕೇಂದ್ರ ಸರ್ಕಾರ ಪ್ರಯತ್ನ ಕೈಗೊಂಡಿತ್ತು. ಇದರಿಂದಾಗಿ ರಾಜ್ಯಗಳ ಅಧಿಕಾರ ಮೊಟಕುಗೊಂಡಿದೆ ಎಂದು ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಸಹಕಾರ ಸಂಘಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಂವಿಧಾನದ 97ನೇ ತಿದ್ದುಪಡಿ ಸಿಂಧುತ್ವವನ್ನು ಕೋರ್ಟ್ ಎತ್ತಿಹಿಡಿದಿದೆ. ತಿದ್ದುಪಡಿಯ ಕೆಲವು ಭಾಗಗಳನ್ನು ರದ್ದುಪಡಿಸಿದ್ದು, ಇದರಿಂದ ರಾಜ್ಯಗಳಿಗೆ ಅಧಿಕಾರ ಮತ್ತೆ ಸಿಕ್ಕಂತಾಗಿದೆ.
ಗ್ರಾಮೀಣ ಭಾಗದ ಹಣಕಾಸು ವಹಿವಾಟಿನ ಜೀವನಾಡಿಯಾಗಿರುವ ಸಹಕಾರ ಸಂಘಗಳ ಸುಧಾರಣೆಗೆ ಸರ್ಕಾರಗಳು ಅನೇಕ ಪ್ರಯತ್ನ ಕೈಗೊಂಡಿದೆ. 2011 ರಲ್ಲಿ 97ನೇ ತಿದ್ದುಪಡಿ ಮೂಲಕ ಕೇಂದ್ರ ಸರ್ಕಾರ ಸರ್ಕಾರ ಸಹಕಾರ ಸಂಘಗಳಿಗೆ ಕಾಯಕಲ್ಪ ನೀಡುವ ಪ್ರಯತ್ನ ಕೈಗೊಂಡಿತ್ತು. 2012 ರ ಫೆಬ್ರವರಿ 15 ರಿಂದ ತಿದ್ದುಪಡಿ ಆದೇಶ ಜಾರಿಗೆ ಬಂದಿದ್ದು, ಇದನ್ನು ಪ್ರಶ್ನಿಸಿ ಕೆಲವರು ಗುಜರಾತ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದು, ಗುಜರಾತ್ ಹೈಕೋರ್ಟು 2013ರ ಏಪ್ರಿಲ್ 23 ರಂದು ತೀರ್ಪು ನೀಡಿ ಸಹಕಾರ ವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾನೂನು ರೂಪಿಸುವಂತಿಲ್ಲ ಎಂದು ಹೇಳಿದ್ದು, ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಕೆ.ಎಂ. ಜೋಸೆಫ್ ಮತ್ತು ಬಿ.ಆರ್. ಗವಾಯಿ ಅವರುಗಳಿದ್ದ ತ್ರಿಸದಸ್ಯ ಪೀಠ 2:1 ಬಹುಮತದೊಂದಿಗೆ ತೀರ್ಪು ನೀಡಿದೆ. 97 ನೇ ತಿದ್ದುಪಡಿಯ ಸಿಂಧುತ್ವ ಎತ್ತಿ ಹಿಡಿಯಲಾಗಿದ್ದು, ಸಹಕಾರ ರಚನೆಗೆ ಸಂಬಂಧಿಸಿದ ಪರಿಚ್ಛೇದ ರದ್ದು ಮಾಡಲಾಗಿದೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯದ ರಚಿಸಿದ್ದು, ಗೃಹಸಚಿವ ಅಮಿತ್ ಶಾ ಅವರಿಗೆ ಹೊಸ ಸಚಿವಾಲಯದ ಹೊಣೆ ನೀಡಲಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಎನ್ಸಿಪಿ ನಾಯಕ ಶರದ್ ಪವಾರ್ ಪ್ರಧಾನಿಯವರನ್ನು ಭೇಟಿಯಾಗಿ ಸಹಕಾರ ವ್ಯವಸ್ಥೆ ರಾಜ್ಯಪಟ್ಟಿಯಲ್ಲಿ ಬರುತ್ತದೆ ಎಂದು ನ್ಯಾಯಾಲಯಗಳು ಹೇಳಿದ್ದು ಹೊಸ ಸಚಿವಾಲಯ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದರು.