ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಆದಷ್ಟು ಬೇಗ ಸರ್ಕಾರ ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೆ ತರುವಂತೆ ಸೂಚನೆ ನೀಡಿದೆ. ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 2ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್, ಹರೀಶ್ ಸಾಳ್ವೆ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಕೋರಿದ್ದರು. ಇದರ ನಂತರ ಪ್ರಕರಣದ ವಿಚಾರಣೆಯನ್ನು ನವೆಂಬರ್ 2 ರವರೆಗೆ ಮುಂದೂಡಲಾಗಿದೆ.
ಬಡ್ಡಿ ಮನ್ನಾ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಹೇಳಿದೆ. ಇದನ್ನು ಜಾರಿಗೆ ತರಲು ಒಂದು ತಿಂಗಳು ಏಕೆ ಬೇಕೆಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿತ್ತು. ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್ ಎಲ್ಲ ಸಾಲಗಳನ್ನು ವಿಭಿನ್ನ ರೀತಿಯಲ್ಲಿ ನೀಡಲಾಗಿದೆ. ಹಾಗಾಗಿ ನವೆಂಬರ್ 2 ರೊಳಗೆ ಸರ್ಕಾರ ಸುತ್ತೋಲೆ ಜಾರಿಗೆ ತರಲಿದೆ ಎಂದಿದ್ದರು. ಇದಕ್ಕೆ ಸುಪ್ರೀಂ ಒಪ್ಪಿಗೆ ನೀಡಿದೆ. ನವೆಂಬರ್ 2ರಂದು ಸರ್ಕಾರ ಈ ಬಗ್ಗೆ ಸುತ್ತೋಲೆ ನೀಡಲಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಸಾಲಗಳ ಮೇಲಿನ ಇಎಂಐಗೆ ವಿನಾಯಿತಿ ನೀಡಿತ್ತು. ಮೊತ್ತದ ಮೇಲೆ ಬಡ್ಡಿಯನ್ನು ನಿಗದಿಪಡಿಸಿತ್ತು. ಆದರೆ ಇಎಂಐ ಮೊತ್ತದ ಮೇಲೆ ಬಡ್ಡಿ ಹೇರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.