ರಾಜ್ಯದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್ಕ್ಯೂ ಗುಣಮಟ್ಟದ ಹೆಸರುಕಾಳು ಖರೀದಿ ಭರಾಟೆ ಜೋರಾಗಿದ್ದು, ಇದುವರೆಗೆ 10,000 ಮೆಟ್ರಿಕ್ ಟನ್ ಗೂ ಹೆಚ್ಚು ಪ್ರಮಾಣದ ಹೆಸರು ಕಾಳು ಆವಕವಾಗಿದೆ.
ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಕ್ಕೆ ಮೊದಲೇ ರಾಜ್ಯಾದ್ಯಂತ 60 ಸಾವಿರ ಮೆಟ್ರಿಕ್ ಹೆಸರು ಕಾಳು ಆವಕವಾಗಿತ್ತು. ಸರ್ಕಾರದ ಖರೀದಿ ಕೇಂದ್ರಗಳಿಗೆ ಪ್ರಮಾಣ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಲೆಕ್ಕಾಚಾರ ತಲೆಕೆಳಗಾಗಿದ್ದು, ಖರೀದಿ ಕೇಂದ್ರ ಆರಂಭವಾದ ಒಂದೂವರೆ ತಿಂಗಳಲ್ಲಿಯೇ ಮಾರಾಟ ಪ್ರಕ್ರಿಯೆ ಶುರುವಾಗಿ ಪ್ರತಿ ಕ್ವಿಂಟಲ್ ಗೆ 8682 ರೂ. ನಂತೆ 10,000 ಮೆಟ್ರಿಕ್ ಟನ್ ಗೂ ಹೆಚ್ಚು ಹೆಸರು ಕಾಳು ಆವಕವಾಗಿದೆ. ಇನ್ನೊಂದು ವಾರದಲ್ಲಿ ರೈತರ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಲಾಗಿದೆ.
ಮುಂಗಾರು ಮಳೆ ಏರಿಳಿತದ ನಡುವೆಯೂ ಬಾಗಲಕೋಟೆ, ಕಲಬುರಗಿ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ ಸೇರಿದಂತೆ 14 ಜಿಲ್ಲೆಗಳ ರೈತರು ಹೆಸರು ಕಾಳು ಬೆಳೆದಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಪ್ರತೀ ಎಕರೆಗೆ ಎರಡು ಕ್ವಿಂಟಲ್, ಒಬ್ಬ ರೈತರಿಂದ ಹತ್ತು ಕ್ವಿಂಟಲ್ ಹೆಸರು ಕಾಳು ಖರೀದಿಸಲಾಗುತ್ತಿದೆ ಎನ್ನಲಾಗಿದೆ.