ನವದೆಹಲಿ: ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಲ್ ಗೆ ಪಾವತಿಸಬೇಕಾದ ಮೊತ್ತವನ್ನು ಸರ್ಕಾರ 5 ರೂ ಹೆಚ್ಚಳ ಮಾಡಿದ್ದು, ಈ ವರ್ಷದ ಅಕ್ಟೋಬರ್ ನಿಂದ ಸಕ್ಕರೆ ಕಾರ್ಖಾನೆಗಳು ಪ್ರತಿ ಕ್ವಿಂಟಲ್ ಗೆ 290 ರೂಪಾಯಿ ಪಾವತಿಸಬೇಕಿದೆ.
ಖರೀದಿ ದರ ಹೆಚ್ಚಳ ಮಾಡಲಾಗಿದ್ದರೂ ಸಕ್ಕರೆ ಬೆಲೆಯ ಮೇಲೆ ಯಾವುದೇ ಪರಿಣಾಮವಿಲ್ಲ ಎಂದು ಸರ್ಕಾರ ತಿಳಿಸಿದೆ. ಎಫ್.ಆರ್.ಪಿ. ಹೆಚ್ಚಿಸಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆ ಒಪ್ಪಿಗೆ ನೀಡಿದ್ದು, 285 ರೂ.ಗಳಿಂದ 290 ರೂ. ಗೆ ಹೆಚ್ಚಳ ಮಾಡಲಾಗಿದೆ.
ಇದರ ಅನ್ವಯ ಕಬ್ಬಿನಿಂದ ಉತ್ಪಾದನೆಯಾಗುವ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದಲ್ಲಿ ಪ್ರತಿ ಹೆಚ್ಚುವರಿ ಶೇಕಡ 0.1 ಕ್ಕೆ ಕ್ವಿಂಟಲ್ ಗೆ ಹೆಚ್ಚುವರಿಯಾಗಿ 2.90 ರೂ. ನೀಡಲಾಗುತ್ತದೆ. ರೈತರ ಹಿತ ಕಾಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.