ಬೆಂಗಳೂರು: ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿಗಾಗಿ 150 ರೂಪಾಯಿ ನೀಡಲು ಸರ್ಕಾರ ಆದೇಶಿಸಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 39 ದಿನಗಳಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ.
ಕಬ್ಬು ಪೂರೈಕೆ ಮಾಡಿದ ರೈತರಿಗೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ(ಎಫ್ಆರ್‌ಪಿ) ಜೊತೆಗೆ ಪ್ರತಿ ಟನ್ ಗೆ 100 ರೂಪಾಯಿ ಹೆಚ್ಚುವರಿ ಹಣ ಕೊಡಬೇಕು. ಎಥೆನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು 50 ರೂಪಾಯಿ ಹೆಚ್ಚುವರಿ ಕೊಡಬೇಕು ಎಂದು ಆದೇಶಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯುವ ಹಂಗಾಮು ಮುಗಿದ ನಂತರ ಸಕ್ಕರೆ, ಎಥೆನಾಲ್ ಮತ್ತು ಇತರೆ ಉಪ ಉತ್ಪನ್ನಗಳ ಮಾರಾಟದಿಂದ ಬರುವ ಅಂತಿಮ ಆದಾಯವನ್ನು ಹಂಚಿಕೆ ಸೂತ್ರದ ಪ್ರಕಾರ ಪರಿಗಣಿಸಿ ಅಂತಿಮ ಕಬ್ಬಿನ ದರ ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು 39 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ. ಬಾಕಿ ಇರುವ ಸಮಸ್ಯೆಗಳು ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳು ಗಡುವು ನೀಡಿದ್ದಾರೆ.