ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಪ್ರತಿ ಟನ್ ಕಬ್ಬಿಗೆ 50 ರೂ. ಎಫ್.ಆರ್.ಪಿ. ಹೆಚ್ಚಳ ಮಾಡಿದ್ದರೂ, ಕಬ್ಬು ಬೆಳೆಗಾರರು ಹೋರಾಟ ಮುಂದುವರೆಸಿದ್ದರಿಂದ ರಾಜ್ಯ ಸರ್ಕಾರ ಮೊಲಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶದಲ್ಲಿ ಪ್ರತಿ ಟನಗೆ 100 ರೂಪಾಯಿ ಹೆಚ್ಚುವರಿಯಾಗಿ ಪಾವತಿಸುವಂತೆ ಆದೇಶ ಹೊರಡಿಸಿದೆ. ಇದರಿಂದಾಗಿ ರೈತರಿಗೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 3050 ರೂಪಾಯಿ ಎಫ್.ಆರ್.ಪಿ. ನಿಗದಿಗೊಳಿಸಿತ್ತು. ಕಬ್ಬಿನ ಎಫ್.ಆರ್.ಪಿ. ಹೆಚ್ಚಳ ಮಾಡುವಂತೆ ಬೆಳೆಗಾರರು ಬೆಂಗಳೂರು, ಮಂಡ್ಯ, ಬೆಳಗಾವಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಸರ್ಕಾರ ಎಥೆನಾಲ್ ಉತ್ಪಾದಿಸುವ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 50 ರೂಪಾಯಿ ಎಫ್.ಆರ್.ಪಿ. ಹೆಚ್ಚಿಸಿ ಆದೇಶ ಹೊರಡಿಸಿತ್ತು.
ಇದಕ್ಕೆ ಒಪ್ಪದ ಕಬ್ಬು ಬೆಳೆಗಾರರು ಹೋರಾಟ ಮುಂದುವರೆಸಿದ್ದರು. ಗುರುವಾರ ಹೊಸ ಆದೇಶ ಹೊರಡಿಸಲಾಗಿದ್ದು, ಮೊಲಾಸಿಸ್ ಮಾರಾಟದಿಂದ ಸಕ್ಕರೆ ಕಾರ್ಖಾನೆಗಳಿಗೆ ಬರುವ ಲಾಭಾಂಶ ಮತ್ತು ಸಾಗಾಣಿಕೆ ವೆಚ್ಚ ಹೆಚ್ಚಳ ಮಾಡಿರುವುದನ್ನು ಪರಿಗಣಿಸಿ ಹೆಚ್ಚುವರಿಯಾಗಿ ಪ್ರತಿಟನ್ ಗೆ 100 ರೂಪಾಯಿ ಪಾವತಿಸುವಂತೆ ಸೂಚಿಸಲಾಗಿದೆ.