ನವದೆಹಲಿ: ಸಕ್ಕರೆ ಉತ್ಪಾದನೆ ಇಳಿಕೆಯಾಗಿದ್ದು, ಸಕ್ಕರೆ ದರ ಏರಿಕೆಯಾಗುವ ಸಂಭವ ಇದೆ. ಮಳೆ ಕೊರತೆಯ ಕಾರಣ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದೆ ಎಂದು ರಾಷ್ಟ್ರೀಯ ಸಕ್ಕರೆ ಕಾರ್ಖಾನೆಗಳ ಸಹಕಾರ ಒಕ್ಕೂಟ ತಿಳಿಸಿದೆ.
ಈ ವರ್ಷ 330 ಲಕ್ಷ ಟನ್ ಸಕ್ಕರೆ ಉತ್ಪಾದನೆ ನಿರೀಕ್ಷೆ ಇದೆ. ಉತ್ಪಾದನೆ ಕಡಿಮೆಯಾಗಲಿದ್ದು, ಮುಂದಿನ ದಿನಗಳಲ್ಲಿ ಸಕ್ಕರೆ ದರ ಏರಿಕೆ ಕಾಣುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಸಕ್ಕರೆ ದರ ನಿಯಂತ್ರಣಕ್ಕೆ ಮುಂದಿನ ತಿಂಗಳು ಸಕ್ಕರೆ ರಫ್ತು ನಿಷೇಧಿಸಬಹುದು ಎನ್ನಲಾಗಿದೆ.
ಭಾರತ ಸಕ್ಕರೆ ರಫ್ದಿನ ಮೇಲೆ ನಿಷೇಧ ಏರಿದಲ್ಲಿ ಜಾಗತಿಕ ಮಟ್ಟದಲ್ಲಿ ಸಕ್ಕರೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಅಲ್ಲದೆ, ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಹಣದುಬ್ಬರ ಕೂಡ ಹೆಚ್ಚಾಗುವ ಸಂಭವವಿದೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಸರಾಸರಿಗಿಂತ ಶೇಕಡ 50ರಷ್ಟು ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿದೆ. ಇದು ಸಕ್ಕರೆ ಉತ್ಪಾದನೆ ಮೇಲೆ ಪರಿಣಾಮ ಬೀರಲಿದ್ದು, ಉತ್ಪಾದನೆ ಕಡಿಮೆಯಾಗಿ ದರ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.