ಚಿಕ್ಕಬಳ್ಳಾಪುರ: ಈ ವರ್ಷ 15 ಸಾವಿರ ಕೋಟಿ ರೂಪಾಯಿ ಕೃಷಿ ಸಾಲ ನೀಡುವ ಗುರಿ ಇದೆ ಎಂದು ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಎಲ್ಲ ಇಲಾಖೆಗಳ ಸಮನ್ವಯತೆಯೊಂದಿಗೆ ರೈತರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ರೈತರ ಸಂಬಂಧಿತ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ್ದಾರೆ.
ಕುಟುಂಬ ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಶೈಕ್ಷಣಿಕ, ಸಾಮಾಜಿಕ ಪ್ರಗತಿಯಾಗುತ್ತದೆ. ಸಹಕಾರ ಕ್ಷೇತ್ರದ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯ ದ್ವಿಗುಣಗೊಳಿಸಲು ಪೂರಕವಾದ ಯೋಜನೆ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಕಳೆದ ವರ್ಷ ರೈತರಿಗೆ 13 ಸಾವಿರ ಕೋಟಿ ರೂಪಾಯಿ ಸಾಲ ನೀಡಲಾಗಿದ್ದು, ಈ ಸಲ 15 ಸಾವಿರ ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿದೆ. ಕೊರೋನಾ ನಡುವೆಯೂ ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಕ್ರಮಕೈಗೊಂಡಿದೆ. ಇದು ಸರ್ಕಾರದ ಬದ್ಧತೆ ತೋರಿಸುತ್ತದೆ ಎಂದು ತಿಳಿಸಿದ್ದಾರೆ.