ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರಸಗೊಬ್ಬರ ಸಬ್ಸಿಡಿ ರೈತರ ಖಾತೆಗೆ ನೇರವಾಗಿ ಜಮಾ ಮಾಡುವ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ.
ರಸಗೊಬ್ಬರ ಖರೀದಿ ಮಾಡುವ ರೈತರ ಬ್ಯಾಂಕ್ ಖಾತೆಗೆ ಸಬ್ಸಿಡಿ ಮೊತ್ತವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ಕಾಳಸಂತೆ ದಂಧೆಗೆ ಕಡಿವಾಣ ಹಾಕಬಹುದಾಗಿದ್ದು, ಯೋಜನೆ ಜಾರಿ ಕುರಿತಾಗಿ ರಾಜ್ಯ ಸರ್ಕಾರಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
ರೈತರು ಸಬ್ಸಿಡಿ ಮೊತ್ತ ಕಳೆದು ನಿಗದಿ ಮಾಡಲಾದ ಎಂ.ಆರ್.ಪಿ. ದರವನ್ನು ಪಾವತಿಸಿ ರಸಗೊಬ್ಬರ ಖರೀದಿಸಲು ಅವಕಾಶವಿದೆ. ಇನ್ನು ಮುಂದೆ ರೈತರು ಪೂರ್ಣ ಹಣ ಪಾವತಿಸಬೇಕಾಗುತ್ತದೆ. ಸಬ್ಸಿಡಿ ಮೊತ್ತವನ್ನು ಖಾತೆಗೆ ಪಾವತಿ ಮಾಡಲಾಗುವುದು.
ರೈತರು ಹೊಂದಿರುವ ಕೃಷಿ ಭೂಮಿಯನ್ನು ಆಧರಿಸಿ ರಸಗೊಬ್ಬರ ನಿಗದಿ ಮಾಡಲಾಗುವುದು. ಅಷ್ಟೇ ಪ್ರಮಾಣದ ಗೊಬ್ಬರವನ್ನು ರೈತರು ಖರೀದಿಸಬೇಕಾಗುತ್ತದೆ. ಪ್ರಸ್ತುತ 45 ಕೆಜಿ ಯೂರಿಯಾ ಗೊಬ್ಬರ ಚೀಲಕ್ಕೆ 266.5 ರೂಪಾಯಿ ದರ ಇದೆ. ಒಂದು ಚೀಲ ಯೂರಿಯಾ ಉತ್ಪಾದಿಸಲು ಸುಮಾರು 1 ಸಾವಿರ ರೂ. ವೆಚ್ಚವಾಗಲಿದ್ದು ಸರ್ಕಾರ ಸಬ್ಸಿಡಿ ರೂಪದಲ್ಲಿ ಗೊಬ್ಬರ ಉತ್ಪಾದನೆ ಸಂಸ್ಥೆಗಳಿಗೆ ಹಣ ನೀಡುತ್ತದೆ.
ರೈತರ ಖಾತೆಗೆ ನೇರವಾಗಿ ನಗದು ಪಾವತಿಸುವ ವ್ಯವಸ್ಥೆ ಜಾರಿಯಾದಲ್ಲಿ ರೈತರು ಒಂದು ಚೀಲ ಯೂರಿಯಾ ಖರೀದಿಸಲು ಸುಮಾರು ಒಂದು ಸಾವಿರ ರೂಪಾಯಿ ಹಣ ಕೊಡಬೇಕಿದೆ. ನಂತರ ಗ್ಯಾಸ್ ಸಬ್ಸಿಡಿ ಮಾದರಿಯಲ್ಲಿ ರೈತರ ಖಾತೆಗೆ ಹಣ ಜಮಾ ಮಾಡಲಿದ್ದು ಇದರಿಂದ ರೈತರಿಗೆ ಗೊಬ್ಬರ ಖರೀದಿಗೆ ಹಣ ಹೊಂದಿಸಲು ಕಷ್ಟವಾಗುತ್ತದೆ ಎನ್ನಲಾಗಿದೆ.