ಬೆಂಗಳೂರು: ಭಾರೀ ಏರಿಕೆಯಾಗಿರುವ ವಿದ್ಯುತ್ ಶುಲ್ಕ ಇಳಿಕೆ ಮಾಡುವಂತೆ ಸಾರ್ವಜನಿಕರು, ವಾಣಿಜ್ಯ ಗ್ರಾಹಕರು, ಕೈಗಾರಿಕೆಗಳ ಮಾಲೀಕರು ಒತ್ತಡ ಹಾಕುತ್ತಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ವಿದ್ಯುತ್ ದರ ಮತ್ತು ಎಫ್ಎಸಿ ಶುಲ್ಕ ಹೆಚ್ಚಳ ಮಾಡಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶ ಬದಲಾವಣೆ ಮಾಡಿ ಶುಲ್ಕ ಇಳಿಕೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದರ ಬದಲಿಗೆ ಆಯೋಗದ ದರ ಹೆಚ್ಚಳ ಆದೇಶ ವಿರುದ್ಧ ಮೇಲ್ಮನವಿ ನ್ಯಾಯಾಧಿಕಾರಣಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಲಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿನ ವಿದ್ಯುತ್ ದರ ಏರಿಕೆ ಇಳಿಕೆ ಮಾಡುವುದಾದಲ್ಲಿ ಆಯೋಗದ ಆದೇಶ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಆಯೋಗ ಪರಿಷ್ಕರಿಸಿದ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ.
ಪ್ರತಿ ಯೂನಿಟ್ ಗೆ ಹೆಚ್ಚಾಗಿರುವ 70 ಪೈಸೆ ಮತ್ತು ಎಫ್ಎಸಿ ಶುಲ್ಕ ಪ್ರತಿ ಯೂನಿಟ್ ಗೆ 51 ರಾಜ್ಯ ಸರ್ಕಾರ ಭರಿಸಬೇಕಿದೆ. ಇದರಿಂದ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಗೃಹಜ್ಯೋತಿ ಹೊರತಾದ ಬಳಕೆದಾರರು, ವಾಣಿಜ್ಯ ಗ್ರಾಹಕರ ಮೇಲಿನ ಹೆಚ್ಚುವರಿ ಹೋರೆ ಇಳಿಸಬಹುದಾಗಿದೆ. ಆದರೆ, ಪ್ರತಿ ವರ್ಷ ಸರ್ಕಾರದಿಂದ ಗೃಹಜ್ಯೋತಿ ಯೋಜನೆಗೆ 12 ಸಾವಿರ ಕೋಟಿ ರೂಪಾಯಿ, ರೈತರ ಕೃಷಿ ಪಂಪ್ಸೆಟ್ ಗಳಿಗೆ 14 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಬೇಕಿರುವುದರಿಂದ ಇದು ಅಸಾಧ್ಯವೆಂದು ಹೇಳಲಾಗಿದೆ.