
ನವದೆಹಲಿ: ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಇಪಿಎಫ್ಒ ಖಾತೆಯಿಂದ ಚಂದಾದಾರರು ಎರಡನೇ ಬಾರಿಗೆ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮರುಪಾವತಿಸಲಾಗದ ಮುಂಗಡ ಪಡೆಯಲು ಇಪಿಎಫ್ಒ ಸದಸ್ಯರಿಗೆ ಅವಕಾಶ ನೀಡಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮಾಹಿತಿ ನೀಡಿದ್ದು, ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಚಂದಾದಾರರಿಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಮೊದಲನೆಯ ಅಲೆ ಸಂದರ್ಭದಲ್ಲಿ ಈಗಾಗಲೇ ಮುಂಗಡ ಪಡೆದುಕೊಂಡ ಸದಸ್ಯರು ಕೂಡ ಎರಡನೇ ಬಾರಿಗೆ ಮುಂಗಡ ಪಡೆಯಬಹುದಾಗಿದೆ. ಅರ್ಜಿ ಸ್ವೀಕರಿಸಿದ ಮೂರು ದಿನದೊಳಗೆ ಮುಂಗಡ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಚಂದಾದಾರರು ಮೂರು ತಿಂಗಳವರೆಗಿನ ಮೂಲವೇತನ ಮತ್ತು ಡಿಎ ಅಥವಾ ಭವಿಷ್ಯನಿಧಿ ಖಾತೆಯಲ್ಲಿರುವ ಶೇಕಡ 75 ರಷ್ಟು ಹಣ ಇದರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಮೊದಲಾದ ಸಾಮಾನ್ಯ ಅಗತ್ಯತೆಗಳಿಗೆ ಚಂದಾದಾರರು ಮರುಪಾವತಿಸಲಾಗದ ಮುಂಗಡವನ್ನು ಪಡೆಯಬಹುದಾಗಿದೆ. EPFO ವೆಬ್ಸೈಟ್ ಮೂಲಕ ಚಂದಾದಾರರು ಅರ್ಜಿ ಸಲ್ಲಿಸಬಹುದಾಗಿದೆ ಎನ್ನಲಾಗಿದೆ.