ಭಾರತದಲ್ಲಿನ ವಾಹನಗಳು ಕ್ರ್ಯಾಶ್ ಟೆಸ್ಟ್(ಅಪಘಾತ ಪರೀಕ್ಷೆ) ಆಧಾರದ ಮೇಲೆ ಸ್ಟಾರ್ ರೇಟಿಂಗ್ ಗಳನ್ನು ಪಡೆಯುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.
ಕ್ರ್ಯಾಶ್ ಟೆಸ್ಟ್ ಗಳಲ್ಲಿ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್ ಗಳನ್ನು ನೀಡಲು ಭಾರತ್ ಎನ್.ಸಿ.ಎ.ಪಿ.(ಹೊಸ ಕಾರ್ ಅಸೆಸ್ ಮೆಂಟ್ ಪ್ರೋಗ್ರಾಂ) ಅನ್ನು ಪರಿಚಯಿಸಲು ಕರಡು ಜಿ.ಎಸ್.ಆರ್. ಅಧಿಸೂಚನೆಯನ್ನು ಅನುಮೋದಿಸಿದ ಗಡ್ಕರಿ, ಭಾರತ್ ಎನ್.ಸಿ.ಎ.ಪಿ. ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರಿಗೆ ಅವರ ರೇಟಿಂಗ್ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಇದು ಸುರಕ್ಷಿತ ವಾಹನಗಳನ್ನು ತಯಾರಿಸಲು ಭಾರತದಲ್ಲಿನ ಮೂಲ ಉಪಕರಣ ತಯಾರಕರ(OEM) ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ಕ್ರ್ಯಾಶ್ ಟೆಸ್ಟ್ ಗಳ ಆಧಾರದ ಮೇಲೆ ಭಾರತೀಯ ಕಾರುಗಳ ಸ್ಟಾರ್ ರೇಟಿಂಗ್ ಕಾರುಗಳಲ್ಲಿ ರಚನಾತ್ಮಕ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾತ್ರವಲ್ಲದೆ ಭಾರತೀಯ ಆಟೋಮೊಬೈಲ್ಗಳ ರಫ್ತು-ಯೋಗ್ಯತೆಯನ್ನು ಹೆಚ್ಚಿಸಲು ಅತ್ಯಂತ ನಿರ್ಣಾಯಕವಾಗಿದೆ ಎಂದು ಗಡ್ಕರಿ ಹೇಳಿದರು.
ಭಾರತವನ್ನು ವಿಶ್ವದಲ್ಲೇ ನಂಬರ್ ಒನ್ ಆಟೋಮೊಬೈಲ್ ಹಬ್ ಮಾಡುವ ಧ್ಯೇಯದೊಂದಿಗೆ ನಮ್ಮ ಆಟೋಮೊಬೈಲ್ ಉದ್ಯಮವನ್ನು ಆತ್ಮನಿರ್ಭರ್ ಮಾಡುವಲ್ಲಿ ಭಾರತ್ ಎನ್ಸಿಎಪಿ ನಿರ್ಣಾಯಕ ಸಾಧನವಾಗಿದೆ ಎಂದು ಅವರು ಹೇಳಿದರು.