ಕೊರೊನಾ ಸಂಕಷ್ಟದ ನಡುವೆ ಹೂಡಿಕೆದಾರರು, ಸುರಕ್ಷಿತ ಎಂಬ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರ ಮಧ್ಯೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕನೇ ಹಂತದ ʼಸವರಿನ್ ಗೋಲ್ಡ್ ಬಾಂಡ್ ಸ್ಕೀಮ್ʼ ಅನ್ನು ಇಂದಿನಿಂದ ಆರಂಭಿಸಿದೆ.
ಪ್ರತಿ ಗ್ರಾಂ ಚಿನ್ನಕ್ಕೆ 4,852 ರೂಪಾಯಿ ನಿಗದಿಪಡಿಸಿದ್ದು, ಈ ಯೋಜನೆ ಜುಲೈ 6 ರ ಇಂದಿನಿಂದ ಜುಲೈ 10 ರ ವರೆಗೆ ಐದು ದಿನಗಳ ಕಾಲ ಜಾರಿಯಲ್ಲಿರಲಿದೆ. ಹೂಡಿಕೆದಾರರು ಆನ್ ಲೈನ್ ಮೂಲಕ ಖರೀದಿಸಿ ಡಿಜಿಟಲ್ ಪಾವತಿ ಮಾಡಿದರೆ ಅಂತವರಿಗೆ 50 ರೂ. ಗಳ ರಿಯಾಯಿತಿ ಸಿಗಲಿದ್ದು, ಆಗ ಪ್ರತಿ ಗ್ರಾಂ ಚಿನ್ನಕ್ಕೆ 4,802 ರೂಪಾಯಿ ತಗುಲಲಿದೆ.
ಈ ಬಾಂಡ್ ಗಳು ವಾಣಿಜ್ಯ ಬ್ಯಾಂಕ್, ಅಂಚೆ ಕಚೇರಿ, ಬಿಎಸ್‌ಇ, ಎನ್‌ಎಸ್‌ಇ ಮತ್ತು ನ್ಯಾಷನಲ್ ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್‌ನಲ್ಲಿ ಲಭ್ಯವಿದ್ದು, ವ್ಯಕ್ತಿಗತವಾಗಿ, ಟ್ರಸ್ಟ್‌ಗಳು, ಸಾಮಾಜಿಕ ಸಂಘಟನೆಗಳು, ಅವಿಭಕ್ತ ಹಿಂದೂ ಕುಟುಂಬಗಳು ಇದನ್ನು ಕೊಂಡುಕೊಳ್ಳಲು ಅವಕಾಶವಿದೆ.
ಒಬ್ಬ ವ್ಯಕ್ತಿ ಕನಿಷ್ಟ 1 ಗ್ರಾಂ ನಿಂದ ಗರಿಷ್ಟ 4 ಕೆ.ಜಿ. ವರೆಗೆ, ಅವಿಭಕ್ತ ಹಿಂದೂ ಕುಟುಂಬ 4 ಕೆ.ಜಿ. ವರೆಗೆ ಹಾಗೂ ಟ್ರಸ್ಟ್ 20 ಕೆ.ಜಿ. ವರೆಗೆ ಸವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಅಡಿ ಬಾಂಡ್ ಗಳನ್ನು ಖರೀದಿಸಬಹುದಾಗಿದೆ.