ಸಾರ್ವಭೌಮ ಚಿನ್ನದ ಬಾಂಡ್ ಯೋಜನೆ ಮೊದಲ ಕಂತು ಮೇ 17ರಿಂದ ಅಂದ್ರೆ ಇಂದಿನಿಂದ ಶುರುವಾಗಿದ್ದು, ಮೇ 21ರವರೆಗೆ ಜಾರಿಯಲ್ಲಿರಲಿದೆ. ಮೇ 25ರಂದು ಬಾಂಡ್ ವಿತರಣೆ ಮಾಡಲಾಗುವುದು. ಇದ್ರಲ್ಲಿ ಹೂಡಿಕೆ ಮಾಡುವವರಿಗೆ ಶುಕ್ರವಾರವೇ ಆರ್ಬಿಐ ಮಹತ್ವದ ಸೂಚನೆ ನೀಡಿತ್ತು. ಸಾರ್ವಭೌಮ ಚಿನ್ನದ ಬಾಂಡ್ ಬೆಲೆಯನ್ನು ಆರ್ಬಿಐ 4,777 ರೂಪಾಯಿಗೆ ನಿಗದಿಪಡಿಸಿದೆ.
ಮೇ 2021 ರಿಂದ ಸೆಪ್ಟೆಂಬರ್ 2021 ರವರೆಗೆ ಆರು ಕಂತುಗಳಲ್ಲಿ ಬಾಂಡ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ಭಾರತ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್, ಬಾಂಡ್ ನೀಡಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 50 ರೂಪಾಯಿಗಳ ರಿಯಾಯಿತಿ ನೀಡಲು ನಿರ್ಧರಿಸಿದೆ. ಪಾವತಿ ಡಿಜಿಟಲ್ ರೂಪದಲ್ಲಿರುತ್ತದೆ.
ಈ ಬಾಂಡ್‌ಗಳನ್ನು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಎನ್‌ಎಸ್‌ಇ ಮತ್ತು ಬಿಎಸ್‌ಇಯಂತಹ ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಯೋಜನೆಯಡಿ ಹೂಡಿಕೆದಾರರು ಕನಿಷ್ಠ ಒಂದು ಗ್ರಾಂ ಚಿನ್ನ ಮತ್ತು ಗರಿಷ್ಠ ನಾಲ್ಕು ಕಿಲೋಗ್ರಾಂ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಎಂಟು ವರ್ಷಗಳ ಹೂಡಿಕೆಯ ಅವಧಿ ಇದಕ್ಕಿದೆ. ಐದನೇ ವರ್ಷದ ನಂತರ ಹಿಂತೆಗೆದುಕೊಳ್ಳುವ ಆಯ್ಕೆ ಇರಲಿದೆ.
ಹಿಂದೂ ಅವಿಭಜಿತ ಕುಟುಂಬಗಳಿಗೆ ಗರಿಷ್ಠ 4 ಕೆಜಿ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಗೋಲ್ಡ್ ಬಾಂಡ್ ಯೋಜನೆಯನ್ನು ಮೊದಲ ಬಾರಿಗೆ ನವೆಂಬರ್ 2015 ರಲ್ಲಿ ಪ್ರಾರಂಭಿಸಲಾಯಿತು.