2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯವರೆಗೂ ಸೋನಿಯಾ ಗಾಂಧಿಯೇ ಎಐಸಿಸಿಯ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯುವ ನಿರೀಕ್ಷೆ ಇದೆ. ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಯುವ ನಾಯಕರನ್ನ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರುವ ಸಾಧ್ಯತೆ ತುಂಬಾನೇ ಕಡಿಮೆಯಾಗಿದೆ. ಆದರೆ ಅವರು ಪಕ್ಷದ ಪ್ರಮುಖ ನಾಯಕರಾಗಿ ಇರಲಿದ್ದಾರೆ.
2024ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪುರಾತನ ಪಕ್ಷವು ದೇಶದಲ್ಲಿ ಮತ್ತೆ ಕಾಂಗ್ರೆಸ್ಗೆ ಜೀವ ತುಂಬುವ ನಿರೀಕ್ಷೆಯಲ್ಲಿ ಇದೆ. ಇದಕ್ಕಾಗಿ ಈ ಬಾರಿ ಗಾಂಧಿ ಕುಟುಂಬದ ಜೊತೆಯಲ್ಲಿ ಕಾಂಗ್ರೆಸ್ನ ಯುವ ನಾಯಕರು ಸಹ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುವುದನ್ನ ಕಾಣಬಹುದಾಗಿದೆ.
ಮೂಲಗಳ ಪ್ರಕಾರ ಕಾಂಗ್ರೆಸ್ ನಾಲ್ಕು ಕಾರ್ಯಾಧ್ಯಕ್ಷರನ್ನ ಆಯ್ಕೆ ಮಾಡಲಿದೆ. ಇವರು ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಪಕ್ಷ ಸಂಘಟನೆಗೆ ಯಾವ್ಯಾವ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಸಲಹೆ ನೀಡಲಿದ್ದಾರೆ. ಗುಲಾಮ್ ನಬಿ ಆಜಾದ್, ಸಚಿನ್ ಪೈಲಟ್, ಕುಮಾರಿ ಸೆಲ್ಜಾ, ಮುಕುಲ್ ವಾಸ್ನಿಕ್ ಹಾಗೂ ರಮೇಶ್ ಚೆನ್ನಿಥಲಾರನ್ನ ಈ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಎಐಸಿಸಿಯಲ್ಲಿ ಪ್ರಿಯಾಂಕ ಗಾಂಧಿ ವಾದ್ರಾ ಯಾವ ಹೊಸ ಜವಾಬ್ದಾರಿಯನ್ನ ನಿರ್ವಹಿಸಲಿದ್ದಾರೆ ಅನ್ನೋದಕ್ಕೆ ಇನ್ನೂ ಸೂಕ್ತ ಮಾಹಿತಿ ಹೊರಬಿದ್ದಿಲ್ಲ. ಪ್ರಸ್ತುತ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದಲ್ಲಿ ಪಕ್ಷದ ವ್ಯವಹಾರಗಳನ್ನ ನಿರ್ವಹಿಸುತ್ತಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಕ್ಷಕ್ಕೆ ನೂತನ ಅಧ್ಯಕ್ಷರು ಬೇಕೆಂಬ ಕೂಗು ಕೇಳಿಬರುತ್ತಲೇ ಇದೆ.