ನವದೆಹಲಿ: ಕೇಂದ್ರ ಸರ್ಕಾರವು ಮಾರ್ಚ್ 31 ರಂದು ಹಿರಿಯ ನಾಗರಿಕ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಖಾತೆ ಯೋಜನೆ, ಮಾಸಿಕ ಆದಾಯ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿ ಠೇವಣಿ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಿದೆ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ. ಆದಾಗ್ಯೂ, ಸರ್ಕಾರ ಈ ಅವಧಿಗೆ ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಯೋಜನೆಯ ಬಡ್ಡಿ ದರವನ್ನು 7.1 ಶೇಕಡಾದಲ್ಲಿ ಬದಲಾಯಿಸದೆ ಇರಿಸಿದೆ.
ಶುಕ್ರವಾರ ಹಣಕಾಸು ಸಚಿವಾಲಯ ಈ ಘೋಷಣೆ ಮಾಡಿದೆ. ಏಪ್ರಿಲ್ 1 ರಿಂದ ಪ್ರಾರಂಭವಾಗುವ ತ್ರೈಮಾಸಿಕದಲ್ಲಿ ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸಚಿವಾಲಯವು 70 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರವನ್ನು ಶೇಕಡ 8 ರಿಂದ ಶೇಕಡ 8.2 ಕ್ಕೆ, ಕಿಸಾನ್ ವಿಕಾಸ್ ಪತ್ರಕ್ಕೆ ಶೇಕಡಾ 7.2 ರಿಂದ ಶೇಕಡಾ 7.5 ಕ್ಕೆ ಹೆಚ್ಚಿಸಲಾಗಿದೆ.
ಒಂದು, ಎರಡು, ಮೂರು ಮತ್ತು ಐದು ವರ್ಷಗಳ ಅವಧಿಯ ಠೇವಣಿಗಳ ಬಡ್ಡಿದರವನ್ನು ಕಳೆದ ತ್ರೈಮಾಸಿಕದಲ್ಲಿ ಶೇಕಡಾ 6.6, 6.8, 6.9, 7.0 ರಿಂದ ಕ್ರಮವಾಗಿ ಶೇಕಡ 6.8, 6.9, 7.0 ಕ್ಕೆ ಮತ್ತು ಶೇ.7.5 ಕ್ಕೆ ಹೆಚ್ಚಿಸಿದೆ.
ಮಾಸಿಕ ಆದಾಯ ಖಾತೆ ಯೋಜನೆಯ ಬಡ್ಡಿದರವನ್ನು ಪ್ರಸ್ತುತ ಶೇಕಡ 7.1 ರಿಂದ ಶೇಕಡ 7.4 ಕ್ಕೆ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಬಡ್ಡಿ ದರವನ್ನು ಶೇ 7ರಿಂದ ಶೇ 7.7ಕ್ಕೆ ಏರಿಸಲಾಗಿದೆ.
ಅಲ್ಲದೆ, ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿರುವವರು ಈಗ ಶೇಕಡಾ 7.6 ರಿಂದ ಶೇಕಡಾ 8 ರ ಬಡ್ಡಿಯನ್ನು ಪಡೆಯುತ್ತಾರೆ.
ಕಳೆದ ಒಂಬತ್ತು ತಿಂಗಳಲ್ಲಿ ಮೂರನೇ ಬಾರಿಗೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸರ್ಕಾರ ಪರಿಷ್ಕರಿಸಿದೆ. ಪ್ರಸ್ತುತ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಶೇಕಡ 4 ರಿಂದ 8.2 ರಷ್ಟಿದೆ.