ನವದೆಹಲಿ: ಎಂಟು ಮಂದಿ ಪ್ರಯಾಣಿಸಬಹುದಾದ ಮೋಟಾರು ವಾಹನಗಳಲ್ಲಿ ಕಾರ್ ತಯಾರಕರು ಕನಿಷ್ಠ 6 ಏರ್ ಬ್ಯಾಗ್ ಗಳನ್ನು ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
‘ಇಂಟೆಲ್ ಇಂಡಿಯಾ’ಸ್ ಸೇಫ್ಟಿ ಪಯೋನಿಯರ್ಸ್ ಕಾನ್ಫರೆನ್ಸ್ 2022’ ಅನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಪ್ರತಿ ವರ್ಷ ದೇಶಾದ್ಯಂತ 5 ಲಕ್ಷ ಅಪಘಾತಗಳಲ್ಲಿ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಾರೆ. ಏರ್ ಬ್ಯಾಗ್ ವಾಹನದ ಪ್ರಯಾಣಿಕರ ಸುರಕ್ಷತೆ ವ್ಯವಸ್ಥೆಯಾಗಿದೆ ಎಂದರು.
ಘರ್ಷಣೆಯ ಸಮಯದಲ್ಲಿ ಚಾಲಕ ಮತ್ತು ವಾಹನದ ಡ್ಯಾಶ್ ಬೋರ್ಡ್ ನಡುವೆ ಏರ್ ಬ್ಯಾಗ್ ಮಧ್ಯಪ್ರವೇಶಿಸುತ್ತದೆ, ಇದರಿಂದಾಗಿ ಗಂಭೀರವಾದ ಗಾಯಗಳನ್ನು ತಡೆಯುತ್ತದೆ. ನಮಗೆ ಆಟೋಮೊಬೈಲ್ ಉದ್ಯಮ ಸೇರಿದಂತೆ ಎಲ್ಲಾ ಪಾಲುದಾರರಿಂದ ಸಹಕಾರದ ಅಗತ್ಯವಿದೆ ಎಂದರು.
ಜನವರಿಯಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮೋಟಾರು ವಾಹನಗಳ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ(CMVR) ತಿದ್ದುಪಡಿ ಮಾಡುವ ಮೂಲಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.