ನವದೆಹಲಿ: ಪ್ರತಿ ಕಾರ್ ನಲ್ಲಿ ಆರು ಏರ್ ಬ್ಯಾಗ್ ಗಳನ್ನು ಒದಗಿಸುವಂತೆ ವಾಹನ ತಯಾರಕರನ್ನು ಕೇಳಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಾರ್ ನಲ್ಲಿರುವ ಪ್ರತಿ ಏರ್ ಬ್ಯಾಗ್ ನ ಬೆಲೆ ಕೇವಲ 800 ರೂ. ಆಗಿರುವುದರಿಂದ, ಕಾರ್ ಗಳಲ್ಲಿ ಸುಧಾರಿತ ಸುರಕ್ಷತಾ ವೈಶಿಷ್ಟ್ಯವಾಗಿ ಹೆಚ್ಚಿನ ಏರ್ ಬ್ಯಾಗ್ ಗಳನ್ನು ಒದಗಿಸುವಂತೆ ವಾಹನ ತಯಾರಕರನ್ನು ಕೇಳಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಸಂಸತ್ ಗೆ ತಿಳಿಸಿದರು.
ಪ್ರಸ್ತುತ, ಪ್ರತಿ ಕಾರ್ ನಲ್ಲಿ ಕೇವಲ ಎರಡು ಏರ್ ಬ್ಯಾಗ್ ಗಳು ಕಡ್ಡಾಯವಾಗಿವೆ. ಹಿಂಬದಿಯ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರ ಇನ್ನೂ ನಾಲ್ಕು ಪ್ರಸ್ತಾವನೆಗಳನ್ನು ಮುಂದಿಟ್ಟಿದೆ. ಶೀಘ್ರದಲ್ಲೇ ಈ ಕುರಿತು ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಗಡ್ಕರಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಳ್ಳುವ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಗುರಿಯನ್ನು ನಿಗದಿಪಡಿಸಲಾಗಿದೆ. ವಿಶ್ವ ಗುಣಮಟ್ಟದ ಸುರಕ್ಷತಾ ತಪಾಸಣೆಗೆ ಒಳಪಟ್ಟ ನಂತರ ವಾಹನಗಳಿಗೆ ಸ್ಟಾರ್ ರೇಟಿಂಗ್ ನೀಡಲು ಕೇಂದ್ರ ಸರ್ಕಾರವು ‘ಭಾರತ್ ನ್ಯೂ ಕಾರ್ ಅಸೆಸ್ ಮೆಂಟ್ ಪ್ರೋಗ್ರಾಂ’ನಲ್ಲಿ ಕೆಲಸ ಮಾಡುತ್ತಿದೆ. ಯಾವುದೇ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸುವ ಮೊದಲು, ಈ ಮಾನದಂಡಗಳ ಪ್ರಕಾರ ಕ್ರ್ಯಾಶ್-ಟೆಸ್ಟ್ ಅನ್ನು ಕಡ್ಡಾಯವಾಗಿ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.
ಕಾರ್ ಗಳ ಬೆಲೆ ಹೆಚ್ಚಾಗಲಿದೆ ಎಂದು ಉಲ್ಲೇಖಿಸಿ ಕಾರು ತಯಾರಕರ ಒಂದು ವಿಭಾಗವು ನಾಲ್ಕು ಹೆಚ್ಚುವರಿ ಏರ್ ಬ್ಯಾಗ್ ಗಳನ್ನು ಅಳವಡಿಸುವುದರ ವಿರುದ್ಧ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಾವು ಸಂಭವಿಸುತ್ತವೆ. ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, 2020 ರ ಕ್ಯಾಲೆಂಡರ್ ವರ್ಷದಲ್ಲಿ 3,66,138 ರಸ್ತೆ ಅಪಘಾತಗಳು ವರದಿಯಾಗಿವೆ, ಇದರಲ್ಲಿ 1,31,714 ಜನರು ಸಾವನ್ನಪ್ಪಿದ್ದಾರೆ. 3,48,279 ಜನರು ಗಾಯಗೊಂಡಿದ್ದಾರೆ.