alex Certify ರೈತರಿಗೆ ಮತ್ತೊಂದು ಸಿಹಿಸುದ್ದಿ: ವಿಐಪಿ ಮಾದರಿ ಪಾಸ್-ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಸ್ಟಾಲ್ ಸ್ಥಾಪನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಸಿಹಿಸುದ್ದಿ: ವಿಐಪಿ ಮಾದರಿ ಪಾಸ್-ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಸ್ಟಾಲ್ ಸ್ಥಾಪನೆ

ಶಿವಮೊಗ್ಗ: ಶಿವಮೊಗ್ಗದ ರೇಷ್ಮೆ ಬೆಳೆಗಾರರು ವರ್ಷಕ್ಕೆ 10 ರಿಂದ 11 ಬೆಳೆ ಬೆಳೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇಂತಹ ಸಾಧನೆ ಮಾಡಿರುವ ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಇಂದು ಶಿವಮೊಗ್ಗ ತಾಲ್ಲೂಕಿನ ಕಾಚಿನಕಟ್ಟೆ ಗ್ರಾಮದ ಮಂಜುನಾಥ ಎಂಬ ರೇಷ್ಮೆ ಬೆಳಗಾರರ ರೇಷ್ಮೆ ತಾಕಿಗೆ ಭೇಟಿ ನೀಡಿ ಪರಿಶೀಲಿಸಿ, ರೇಷ್ಮೆ ಬೆಳೆಗಾರರ ಕುಂದು ಕೊರತೆಗಳನ್ನು ಆಲಿಸಿದ ನಂತರ ಅವರು ಮಾತನಾಡಿದರು.

ಬೇರೆ ಕಡೆಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ಉತ್ತಮ ರೀತಿಯಲ್ಲಿ ರೇಷ್ಮೆ ಇಳುವರಿ ಇದೆ. ಬೇರೆಡೆ ವರ್ಷಕ್ಕೆ 8 ಬೆಳೆ ಮೇಲೆ ಬೆಳೆದಿಲ್ಲ. ಆದರೆ, ಇಲ್ಲಿನ ರೈತರು 10 ರಿಂದ 11 ಬೆಳೆ ವಾರ್ಷಿಕವಾಗಿ ಬೆಳೆದು ಉತ್ತಮ ಸಾಧನೆ ಮಾಡಿದ್ದಾರೆಂದು ಶ್ಲಾಘಿಸಿದ ಅವರು, ರೈತರನ್ನು ಗೌರವ ಮತ್ತು ಪ್ರೀತಿಯಿಂದ ಕಾಣಬೇಕು. ಅಧಿಕಾರಿಗಳು ಸಮರ್ಪಕ ಸಲಹೆ, ಸಹಕಾರ ನೀಡಿ ಉತ್ತಮವಾಗಿ ಸ್ಪಂದಿಸಬೇಕೆಂದು ಕಿವಿಮಾತು ಹೇಳಿದರು.

ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ರೇಷ್ಮೆಗೆ ಬೇಡಿಕೆ ಇರಲಿಲ್ಲ. ಹಾಗೂ ರೇಷ್ಮೆ ಚೀನಾದಿಂದ ಆಮದು ಆಗುತ್ತಿತ್ತು. ಈಗ ಚೀನಾ ಆಮದು ಬಂದ್ ಆದ ಹಿನ್ನೆಲೆಯಲ್ಲಿ ಸ್ಥಳೀಯ ರೇಷ್ಮೆಗೆ ಒಳ್ಳೆಯ ಬೇಡಿಕೆ ಇದೆ. ಪ್ರಸ್ತುತ ಉತ್ತಮ ದರ ಕೂಡ ಇರುವುದು ಸಂತಸದ ವಿಚಾರವಾಗಿದೆ.

ರೇಷ್ಮೆ ಒಂದು ಒಳ್ಳೆಯ ಬೆಳೆ. ರೇಷ್ಮೆ ಹುಳು ಸಾಕಾಣೆ ಮನೆ ದೇವಸ್ಥಾನ ಇದ್ದ ಹಾಗೆ. ಅಷ್ಟು ಸ್ವಚ್ಚತೆಯನ್ನು ಅಲ್ಲಿ ಕಾಪಾಡಬೇಕು. ನಾನು ಸಹ ರೈತರ ಮಗನಾಗಿದ್ದು ರೇಷ್ಮೆ ಬೆಳೆದ ಅನುಭವ ಇದೆ. ರೇಷ್ಮೆ ಶ್ರೇಷ್ಟತೆ ಮತ್ತು ಗೌರವದ ಸಂಕೇತ. ಮೈಸೂರು ಸಿಲ್ಕ್ ಸೀರೆಗೆ ಅತ್ಯಂತ ಗೌರವ ಇದೆ ಎಂದರು.

ರೇಷ್ಮೆ ರೈತರ ತಾಕುಗಳಲ್ಲಿ ಕೀಟ ಬಾಧೆ ಕಾಣಿಸುತ್ತಿದ್ದು, ರೇಷ್ಮೆ ಇಲಾಖೆಯವರು ಇದಕ್ಕೆ ಸಮರ್ಪಕ ಕೀಟ ನಾಶಕವನ್ನು ಸಿಂಪಡಿಸುವಂತೆ ಸೂಚನೆ ನೀಡಿದ ಅವರು, ರಾಮನಗರದಲ್ಲಿ ಒಂದು ಅತ್ಯುತ್ತಮ, ನವೀನವಾದ ಹಾಗೂ ರೈತಸ್ನೇಹಿಯಾದ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲು ಯೋಜಿಸಲಾಗುತ್ತಿದ್ದು, ಇದರಿಂದ ರಾಜ್ಯದ ಎಲ್ಲ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.

ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಮಳಿಗೆ:

ರೇಷ್ಮೆ ಮಾರುಕಟ್ಟೆ ವೃದ್ದಿಸಲು ಪ್ರತಿ ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಮಳಿಗೆಗಳನ್ನು ತೆರೆಯಲು ಯೋಜನೆ ತಯಾರಿಸಲಾಗುತ್ತಿದೆ. ನಮ್ಮ ರಾಜ್ಯದ ರೇಷ್ಮೆ ಅತ್ಯಂತ ನೈಜವಾದ ಕಾರಣ ಜಗತ್‍ಪ್ರಸಿದ್ದವಾಗಿದೆ. ಇದಕ್ಕೆ ಸರಿಸಾಟಿ ಮತ್ತೊಂದಿಲ್ಲ. ಮುಂದೆ 10 ಲಕ್ಷ ರೂ.ಗೆ ಒಂದು ಸೀರೆ ಮಾರಾಟ ಮಾಡುವ ಯೋಚನೆ ಕೂಡ ಇದೆ. ಹಾಗೂ ರೇಷ್ಮೆ ಬೆಳೆಗಾರರ ಕುಂದು ಕೊರತೆಗಳನ್ನು ಆಲಿಸಲು ಹಾಗೂ ಸಹಕರಿಸಲು ಶೀಘ್ರದಲ್ಲೇ ಸಹಾಯವಾಣಿ ತೆರೆಯಲಾಗುವುದು. ಯಾವುದೇ ಕಾರಣಕ್ಕೂ ಮಾರುಕಟ್ಟೆ ಸೊರಗಲು ಬಿಡುವುದಿಲ್ಲವೆಂದು ಭರವಸೆ ನೀಡಿದರು.

   ರೇಷ್ಮೆ ಬೆಳೆಗಾರರಿಗೆ ಪಾಸ್:

ರೇಷ್ಮೆ ಬೆಳೆಗಾರರು ತಮ್ಮ ಬೆಳೆಯನ್ನು ಗೂಡ್ಸ್ ಗಾಡಿಗಳ ಮೂಲಕ ರಾಮನಗರದಲ್ಲಿರುವ ಮಾರುಕಟ್ಟೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಪೊಲೀಸರು ಹಿಡಿದು ನಿಲ್ಲಿಸುತ್ತಾರೆ ಎಂದು ರೈತರು ತಿಳಿಸಿದ್ದು, ಇನ್ನು ಮುಂದೆ ರೈತರಿಗೆ ಹಾಗೆ ದಾರಿ ಮಧ್ಯೆ ತೊಂದರೆ ಕೊಡದಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗುತ್ತದೆ. ರೈತರಿಗೆ ವಿಐಪಿ ರೀತಿಯಲ್ಲಿ ಪಾಸ್ ಒದಗಿಸುವ ವ್ಯವಸ್ಥೆ ಮಾಡಲಾಗುವುದು.

ರೇಷ್ಮೆ ಬೆಳೆಗಾರರಾದ ಮಂಜುನಾಥ, ಅನಿಲ್, ಕುಮಾರ್, ಇಲಾಖೆ ಜಂಟಿ ನಿರ್ದೇಶಕ ಭೈರಪ್ಪ, ಕಾಚಿನಕಟ್ಟೆ ಗ್ರಾ.ಪಂ ಅಧ್ಯಕ್ಷೆ ಶ್ವೇತಾ ಮಹೇಶ್, ರೈತರಾದ ದಾಸಪ್ಪ, ನಾಗೇಶ್, ರೇಷ್ಮೆ ಉಪ ನಿರ್ದೇಶಕ ಮುರಳೀಧರ್, ವಿಜ್ಞಾನಿಗಳಾದ ತಿಮ್ಮಾರೆಡ್ಡಿ, ಡಾ.ರಾಧಾಕೃಷ್ಣ ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...