ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಉಪರಾಷ್ಟ್ರಪತಿಗಳ ಓಡಾಟಕ್ಕೆಂದು ಎಕ್ಸ್‌ಕ್ಲೂಸಿವ್ ಆಗಿ ಇರುವ ಏರ್ ಇಂಡಿಯಾ ಒನ್ ಸೀರೀಸ್‌ನ ವಿವಿಐಪಿ ವಿಮಾನ 777-300 ER ದೆಹಲಿಗೆ ಬಂದು ಇಳಿದಿದೆ. ಈ ಸೀರೀಸ್‌ನ ಮೊದಲ ವಿಮಾನ ತಿಂಗಳ ಆರಂಭದಲ್ಲಿ ಭಾರತಕ್ಕೆ ಆಗಮಿಸಿತ್ತು.
ಅತ್ಯಂತ ಸುಧಾರಿತ ಸಂಪರ್ಕ ವ್ಯವಸ್ಥೆಯ ಮೂಲಕ ಫ್ಲೈಟ್‌ನಲ್ಲಿರುವಂತೆಯೇ ಆಡಿಯೋ ಹಾಗೂ ವಿಡಿಯೋ ಸಂಪರ್ಕದ ಮೂಲಕ ದೈನಂದಿನ ಆಡಳಿತದ ಉಸ್ತುವಾರಿ ಮಾಡಲು ಅನುಕೂಲಗಳು ಈ ವಿಮಾನಗಳಲ್ಲಿ ಇವೆ. ಜೊತೆಯಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳು ಸಹ ಇರುವ ಈ ವಿಮಾನವನ್ನು IAF ಪೈಲಟ್‌ಗಳು ಮುನ್ನಡೆಸಲಿದ್ದಾರೆ.
ಜೊತೆಗೆ ಈ ವಿಮಾನದಲ್ಲಿ ಆಫೀಸ್ ಜಾಗ, ಕಾನ್ಫರೆನ್ಸ್ ಕೋಣೆ, ಮಿನಿ ವೈದ್ಯಕೀಯ ಕೇಂದ್ರ, ಮಲಗಲು ಪ್ರತ್ಯೇಕ ಕೋಣೆಗಳಿವೆ. ಭದ್ರತೆಗೆಂದು ವಿಶೇಷ ಸೆಲ್ಫ್ ಪ್ರೊಟೆಕ್ಷನ್ ಸೂಟ್ (SPS), ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಕ್ಷಿಪಣಿ ದಾಳಿ ತಡೆಯಬಲ್ಲ ಕವಚ ಸೇರಿದಂತೆ ಪೂಲ್‌ಪ್ರೂಫ್ ಭದ್ರತಾ ವ್ಯವಸ್ಥೆಗಳೆಲ್ಲಾ ಇವೆ.
8400 ಕೋಟಿ ರೂ.ಗಳ ವೆಚ್ಚದಲ್ಲಿ ವಿಶೇಷ ಫಿಟ್ಟಿಂಗ್ ಮಾಡಿಸಲು ಈ ಎರಡೂ ವಿಮಾನಗಳನ್ನು ಡಲ್ಲಾಸ್‌ಗೆ ಕಳುಹಿಸಲಾಗಿತ್ತು. ಅಮೆರಿಕ ಅಧ್ಯಕ್ಷರ ಏರ್ ಫೋರ್ಸ್ ಒನ್ ಹಾದಿಯಲ್ಲೇ ಭಾರತದ ವಿವಿಐಪಿಗಳಿಗೆ ಏರ್ ಇಂಡಿಯಾ ಒನ್ ಸರಣಿಯ ವಿಮಾನಗಳನ್ನು ಮೀಸಲಿಡಲಾಗಿದೆ.
ವಿವಿಐಪಿಗಳ ಸಂಚಾರಕ್ಕೆಂದು ಕಳೆದ 25 ವರ್ಷಗಳಿಂದ ಇದ್ದ ಬೋಯಿಂಗ್ B-747 ಜಂಬೋ ವಿಮಾನದ ಬದಲಿಗೆ ಅದೇ ಬೋಯಿಂಗ್‌ನ B-777 ಮಾಡೆಲ್ ಅನ್ನು ವಿವಿಐಪಿ ವಿಮಾನವನ್ನಾಗಿ ತರಿಸಲಾಗಿದೆ. ಪ್ರಧಾನ ಮಂತ್ರಿ ಕಾರ್ಯಾಲಯ (PMO) ಸೂಚಿಸಿರುವಂತೆ ವಿಮಾನದ ಬಣ್ಣ ಹಾಗೂ ಆಂತರಿಕ ಡಿಸೈನ್ ಅನ್ನು ಮಾರ್ಪಾಡು ಮಾಡಲಾಗಿದೆ.