ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್), ಹಿರಿಯ ನಾಗರಿಕರ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ವರ್ಷಕ್ಕೆ ಶೇಕಡಾ 7.4ರಷ್ಟು ಬಡ್ಡಿದರ ಸಿಗ್ತಿದೆ. ಎಸ್‌ಸಿಎಸ್‌ಎಸ್, ಐದು ವರ್ಷಗಳ ಮುಕ್ತಾಯ ಅವಧಿಯನ್ನು ಹೊಂದಿದೆ. ಇದು ನಿವೃತ್ತಿ ವಯಸ್ಸಿನಲ್ಲಿ ಸ್ಥಿರವಾದ ಆದಾಯವನ್ನು ಪಡೆಯಲು ನೆರವಾಗಲಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಖಾತೆ ತೆರೆಯಲು, ಒಬ್ಬ ವ್ಯಕ್ತಿಗೆ ಕನಿಷ್ಠ 60 ವರ್ಷ ವಯಸ್ಸಾಗಿರಬೇಕು. ವಿಆರ್ಎಸ್ ಅಡಿಯಲ್ಲಿ ನಿವೃತ್ತರಾದವರು, 55 ವರ್ಷಕ್ಕಿಂತ ಮೇಲ್ಪಟ್ಟವರು ಸಹ ಈ ಯೋಜನೆಯಡಿ ಖಾತೆ ತೆರೆಯಬಹುದು. ಯಾವುದೇ ಅಂಚೆ ಕಚೇರಿಯಲ್ಲಿ ಈ ಖಾತೆ ತೆರೆಯಬಹುದು. ಯೋಜನೆ ಮುಕ್ತಾಯದ ನಂತ್ರ ದಾಖಲೆಗಳನ್ನು ನೀಡಿ ಮತ್ತೆ ಮೂರು ವರ್ಷ ಅದನ್ನು ವಿಸ್ತರಿಸಬಹುದು. ಖಾತೆ ತೆರೆದ ನಂತ್ರ ಯಾವುದೇ ಸಮಯದಲ್ಲಿ ಖಾತೆಯನ್ನು ಮುಚ್ಚಲೂ ಅವಕಾಶವಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲದ ಹಿಂದೆಯೇ ಖಾತೆ ತೆರೆದಿದ್ದರೆ ಅದನ್ನು ಮುಚ್ಚಬಹುದು. ಠೇವಣಿಯ ಬಡ್ಡಿಯನ್ನು ಹಾಗೂ ಬಾಕಿ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಖಾತೆ ಪ್ರಾರಂಭವಾದ ಒಂದು ಮತ್ತು ಎರಡು ವರ್ಷಗಳಲ್ಲಿ ಖಾತೆ ಮುಚ್ಚಿದರೆ, ಠೇವಣಿಯ ಶೇಖಡಾ 1.5 ರಷ್ಟು ಹಣ ಇಟ್ಟುಕೊಂಡು ಉಳಿದ ಹಣವನ್ನು ನೀಡಲಾಗುತ್ತದೆ. ಅವಧಿ ಮುಕ್ತಾಯದ ಮೊದಲೇ ವ್ಯಕ್ತಿ ನಿಧನವಾದ್ರೆ ಖಾತೆ ಮುಚ್ಚಿ, ಉಳಿದ ಹಣವನ್ನು ವಾಪಸ್ ನೀಡಲಾಗುತ್ತದೆ. ಜಂಟಿಯಾಗಿಯೂ ಈ ಖಾತೆಯನ್ನು ತೆರೆಯಬಹುದು.