ಬೆಂಗಳೂರು: ಸುಸ್ಥಿತಿಯಲ್ಲಿಲ್ಲದ 15 ವರ್ಷ ಮೇಲ್ಪಟ್ಟ ವಾಣಿಜ್ಯ ಮತ್ತು 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳು ಗುಜರಿ ಸೇರಲಿವೆ. ರಾಜ್ಯದಲ್ಲಿ ಸುಮಾರು 30.40 ಲಕ್ಷ ವಾಹನಗಳು ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲಾದರೆ ಗುಜರಿ ಸೇರುವುದು ಕಡ್ಡಾಯವಾಗಿದೆ.
ಆಗಸ್ಟ್ 13 ರಂದು ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕುವ ನೀತಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಮಾಲಿನ್ಯಕಾರಕ ಮತ್ತು ಅಸುರಕ್ಷಿತ ವಾಹನಗಳನ್ನು ರಸ್ತೆಯಿಂದ ತೆಗೆಯುವುದೇ ಯೋಜನೆಯ ಉದ್ದೇಶವಾಗಿದೆ.
2022 ರ ಏಪ್ರಿಲ್ ನಿಂದ ರಾಜ್ಯದಲ್ಲಿ ಗುಜರಿ ನೀತಿ ಜಾರಿಗೆ ಬರಲಿದೆ. 2023 ರ ಏಪ್ರಿಲ್ ನಂತರ ಹಳೆಯ ವಾಣಿಜ್ಯ ವಾಹನಗಳನ್ನು ಗುಜರಿಗೆ ಹಾಕಬೇಕಿದೆ. 2024 ರ ಏಪ್ರಿಲ್ ನಂತರ ಹಳೆಯ ಖಾಸಗಿ ವಾಹನಗಳನ್ನು ಗುಜರಿಗೆ ಹಾಕಬೇಕಿದೆ.
ರಾಜ್ಯ ಸರ್ಕಾರದ ವತಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಫಿಟ್ನೆಸ್ ಸೆಂಟರ್ ಸ್ಥಾಪಿಸಲಾಗುತ್ತದೆ. 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನ, 20 ಮೇಲ್ಪಟ್ಟ ಖಾಸಗಿ ವಾಹನಗಳ ಪರೀಕ್ಷೆ ನಡೆಸಿ ಕಾರ್ಯಕ್ಷಮತೆ ಸರಿಯಿಲ್ಲದಿದ್ದರೆ ಗುಜರಿಗೆ ಹಾಕಲು ಸೂಚಿಸಲಾಗುತ್ತದೆ.
ರಾಜ್ಯದಲ್ಲಿ ಸುಮಾರು 2.5 ಕೋಟಿಗೂ ಅಧಿಕ ನೊಂದಾಯಿತ ವಾಹನಗಳಿದ್ದು, ಅವುಗಳಲ್ಲಿ ಸುಮಾರು 60 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟ ವಾಹನಗಳಿದ್ದು, ಪ್ರತಿ 5 ವರ್ಷಕ್ಕೊಮ್ಮೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಬೇಕಿದೆ. ಹೊಸ ಗುಜರಿ ನೀತಿಯನ್ವಯ ಸ್ವಯಂ ಚಾಲಿತ ಫಿಟ್ನೆಸ್ ಪರೀಕ್ಷಾ ಕೇಂದ್ರಗಳಲ್ಲಿ ವಾಹನಗಳ ಇಂಜಿನ್, ಬಿಡಿಭಾಗ ಸೇರಿ 10 ವಿಧದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಫಿಟ್ನೆಸ್ ಇಲ್ಲದ ಹಳೆಯ ವಾಹನ ಗುಜರಿಗೆ ಹಾಕಲಾಗುವುದು ಎನ್ನಲಾಗಿದೆ.